ಭಾರತ ಈಗ ಸೌರಶಕ್ತಿ ಮತ್ತು ವಾಯುಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಎಂಬರ್ ಸಂಘಟನೆಯ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ ವರದಿ ಪ್ರಕಾರ 2024ರಲ್ಲಿ ರಿನಿವಬಲ್ ಎನರ್ಜಿ ತಯಾರಿಕೆಯಲ್ಲಿ ಜರ್ಮನಿಯನ್ನು ಭಾರತ ಹಿಂದಿಕ್ಕಿದೆ. ನ್ಯೂಕ್ಲಿಯಾರ್ ಎನರ್ಜಿಯೂ ಸೇರಿ ಜಗತ್ತಿನಾದ್ಯಂತ ಸ್ವಚ್ಛ ಇಂಧನದ ಉತ್ಪಾದನೆ ಶೇ 40ರ ಗಡಿ ದಾಟಿದೆಯಂತೆ.

ನವದೆಹಲಿ : ಸೌರಶಕ್ತಿ ಮತ್ತು ವಾಯುಶಕ್ತಿ ತಯಾರಿಕೆಯಲ್ಲಿ ಭಾರತವು ಜರ್ಮನಿಯನ್ನು ಮೀರಿಸಿದೆ. ಇದರೊಂದಿಗೆ ಈ ಎರಡು ಮರುಬಳಕೆ ಶಕ್ತಿ ಮೂಲದಿಂದ ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಅತಿದೊಡ್ಡ ದೇಶ ಎನಿಸಿದೆ ಭಾರತ. ಗ್ಲೋಬಲ್ ಎನರ್ಜಿ ಚಿಂತನ ವೇದಿಕೆ ಎನಿಸಿದ ಎಂಬರ್ ಸಂಘಟನೆಯ ಆರನೇ ಆವೃತ್ತಿಯ ಜಾಗತಿಕ ವಿದ್ಯುತ್ ಪರಾಮರ್ಶೆ ವರದಿಯಲ್ಲಿ ಈ ಅಂಶವನ್ನು ಎತ್ತಿತೋರಿಸಲಾಗಿದೆ. 2024ರಲ್ಲಿ ಭಾರತವು ಜರ್ಮನಿಗಿಂತ ಹೆಚ್ಚು ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆ ಮಾಡಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿದೆ.
2024ರಲ್ಲಿ ಜಾಗತಿಕವಾಗಿ ಉತ್ಪಾದನೆಯಾದ ವಿದ್ಯುತ್ನಲ್ಲಿ ಸೌರಶಕ್ತಿ ಮತ್ತು ವಾಯುಶಕ್ತಿಯ ಪಾಲು ಶೇ. 15ರಷ್ಟಿದೆ. 2024ರಲ್ಲಿ ವಿಶ್ವಾದ್ಯಂತ ತಯಾರಾದ ಒಟ್ಟೂ ಸೌರಶಕ್ತಿ ಮತ್ತು ವಾಯುಶಕ್ತಿಯಲ್ಲಿ ಭಾರತದ ಪಾಲು ಶೇ. 10ರಷ್ಟಿರುವುದನ್ನು ಎಂಬರ್ನ ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ ವರದಿಯಲ್ಲಿ ಗುರುತಿಸಲಾಗಿದೆ.
ಭಾರತದಲ್ಲಿ ಶೇ. 22 ಸ್ವಚ್ಛ ಇಂಧನ ಉತ್ಪಾದನೆ
ಭಾರತದಲ್ಲಿ ಈಗಲೂ ಕೂಡ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯೇ ಹೆಚ್ಚು. ಆದರೂ ಇತ್ತೀಚಿನ ವರ್ಷಗಳಲ್ಲಿ ಈ ಪಳೆಯುಳಿಕೆ ಇಂಧನದ ಬಳಕೆ ಕಡಿಮೆ ಆಗುತ್ತಾ ಬಂದಿದೆ. ಸೌರಶಕ್ತಿ, ವಾಯುಶಕ್ತಿಯಂತಹ ಸ್ವಚ್ಚ ಇಂಧನದ ಉತ್ಪಾದನೆ ಹೆಚ್ಚುತ್ತಿದೆ. ಎಂಬರ್ ವರದಿ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ನಲ್ಲಿ ಶೇ. 22ರಷ್ಟವು ಮರುಬಳಕೆ ಶಕ್ತಿಯ ಮೂಲದ್ದಾಗಿವೆ.
ಮರುಬಳಕೆ ಶಕ್ತಿಯಲ್ಲಿ ಜಲವಿದ್ಯುತ್ ಮೂಲದ ವಿದ್ಯುತ್ ಎತಿ ಹೆಚ್ಚು ಇದೆ. ಸೌರಶಕ್ತಿ ಮತ್ತು ವಾಯುಶಕ್ತಿ ಬಳಸಿ ಶೇ. 10ರಷ್ಟು ವಿದ್ಯುತ್ ತಯಾರಾಗುತ್ತಿದೆ.
ಎಂಟು ದಶಕದಲ್ಲಿ ಮೊದಲ ಬಾರಿಗೆ ಈ ಸಾಧನೆ
ಕಲ್ಲಿದ್ದಲು ಬಳಕೆ ಮಾಡದೆ ತಯಾರಾಗುವ ವಿದ್ಯುತ್ ಪ್ರಮಾಣ 2024ರಲ್ಲಿ ಶೇ. 40.9ಕ್ಕೆ ಏರಿದೆಯಂತೆ. 20ನೇ ಶತಮಾನದ ನಲವತ್ತರ ದಶಕದ ಬಳಿಕ ಮೊದಲ ಬಾರಿಗೆ ಸ್ವಚ್ಛ ವಿದ್ಯುತ್ ಪ್ರಮಾಣ ಶೇ. 40ರ ಗಡಿ ಮುಟ್ಟಿದೆ ಎಂದು ಹೇಳಲಾಗುತ್ತಿದೆ.
2024ರಲ್ಲಿ ಮರುಬಳಕೆ ಇಂಧನ ಆಧಾರಿತ ವಿದ್ಯುತ್ ಉತ್ಪಾದನೆ 858 ಟೆರಾವ್ಯಾಟ್ ಗಂಟೆಗಳಿಷ್ಟಿದೆ (ಟಿಡಬ್ಲ್ಯುಎಚ್). ಇದರಲ್ಲಿ ಸೌರಶಕ್ತಿಯ ಪ್ರಮಾಣವೇ ಅತಿಹೆಚ್ಚು. ಕಳೆದ 20 ವರ್ಷದಿಂದಲೂ ಸೌರಶಕ್ತಿ ಜಗತ್ತಿನಲ್ಲಿ ಅತಿವೇಗವಾಗಿ ಹೆಚ್ಚುತ್ತಿರುವ ಶಕ್ತಿಮೂಲವಾಗಿದೆ.