ಕರ್ನಾಟಕದಲ್ಲಿ ಇ-ಪ್ರಸಾದ ಸೇವೆ ಆರಂಭ, ಬೇರೆ ರಾಜ್ಯಗಳ ಭಕ್ತರಿಂದಲೂ ಪ್ರಸಾದಕ್ಕೆ ಬೇಡಿಕೆ

ಬೆಂಗಳೂರು, ಮಾರ್ಚ್​ 30: ಕರ್ನಾಟಕದ ಪ್ರಮುಖ ದೇವಸ್ಥಾನ(Temple)ಗಳ ಪ್ರಸಾದ(Prasad)ವನ್ನು ಭಕ್ತರ ಮನೆಗಳಿಗೆ ತಲುಪಿಸುವ ಇ-ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಚಾಲನೆ ನೀಡಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ಬೇರೆ ರಾಜ್ಯಗಳ ಭಕ್ತರೂ ಕೂಡ ನಮ್ಮ ರಾಜ್ಯದ ದೇವಾಲಯಗಳ ಪ್ರಸಾದಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಇ-ಪ್ರಸಾದ ಸೇವೆಗೆ ಚಾಲನೆ ನೀಡಿ, ಕೆಲ ಸಂದರ್ಭದಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ, ಅಂಥಾ ಸಂದರ್ಭದಲ್ಲಿ ಇ-ಪ್ರಸಾದ ಸೇವೆ ಮೂಲಕ ಆರ್ಡರ್ ಮಾಡಿ ಪ್ರಸಾದ ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನೋ ಲಾಸ್, ನೋ ಪ್ರಾಫಿಟ್ ಅಡಿಯಲ್ಲಿ ಭಕ್ತರಿಗೆ ಸೇವೆ ನೀಡಲಾಗುವುದು.

100 ರಿಂದ 200 ರೂಪಾಯಿಗಳಲ್ಲಿ ಮನೆ ಬಾಗಿಲಿಗೆ ಪ್ರಸಾದ ಕಳುಹಿಸಲಾಗುವುದು ಎಂದು ಹೇಳಿದ್ದರು. ಇದೀಗ ಐದು ಸಾವಿರಕ್ಕೂ ಹೆಚ್ಚು ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಆದರೆ ಜತೆ ಜತೆಯಲ್ಲೇ ಮಹಾರಾಷ್ಟ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ, ಸವದತ್ತಿ ಯಲ್ಲಮ್ಮನ ಪ್ರಸಾದಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಕೇರಳ ಭಕ್ತರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಸಾದಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಇದುವರೆಗೆ ಬಂದಿರುವ ಬೇಡಿಕೆಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ, ಸವದತ್ತಿ ಯಲ್ಲಮ್ಮ ಹಾಗೂ ಮೂಕಾಂಬಿಕಾದೇವಸ್ಥಾನದ ಪ್ರಸಾದಕ್ಕೆ ಹೆಚ್ಚಿದೆ.

ಗ್ರಾಮಗಳಲ್ಲಿರುವ ಕಾಮನ್ ಸರ್ವೀಸ್ ಸೆಂಟ್​ಗೆ ಹೋಗಿ ಮೊದಲು ನೋಂದಾಯಿಸಿಕೊಳ್ಳಬೇಕಿದೆ, ಮುಂಬರುವ ದಿನಗಳಲ್ಲಿ ಮೊಬೈಲ್​ನಿಂದ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಪ್ರಸಾದ್ ಸೇವನೆಯಿಂದ ಅಲ್ಲಲ್ಲಿ ಕೆಟ್ಟ ಘಟನೆಗಳು ಸಂಭವಿಸುತ್ತಿರುವುದರಿಂದ ಶುದ್ಧತೆ ಕಡೆ ಹೆಚ್ಚು ಗಮನಕೊಡಲಾಗಿದೆ.