ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’

ಕಲರ್ಸ್ ಕನ್ನಡ ವಾಹಿನಿಯು ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’ ಅನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ ಎಂದು ಘೋಷಿಸಿದೆ. ಥಿಯೇಟರ್ ಮತ್ತು ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಈಗ ಕನ್ನಡ ದೂರದರ್ಶನದಲ್ಲಿ ವೀಕ್ಷಕರನ್ನು ರಂಜಿಸಲಿದೆ. ಪ್ರಸಾರ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ವಾಹಿನಿ ತಿಳಿಸಿದೆ.

‘ಪುಷ್ಪ 2’ ಸಿನಿಮಾ ಥಿಯೇಟರ್ ಹಾಗೂ ಒಟಿಟಿಯಲ್ಲಿ ಪ್ರಸಾರ ಕಂಡು ಯಶಸ್ಸು ಕಂಡಿದೆ. ಜನರು ಮೆಚ್ಚಿಕೊಂಡ ಈ ಚಿತ್ರ ಈಗ ಟಿವಿಯಲ್ಲಿ ಪ್ರಸಾರ ಕಾಣುವ ದಿನಾಂಕ ಸಮೀಪಿಸಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಅಲ್ಲು ಅರ್ಜುನ್  , ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸಿರೋ ಈ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯು ಈ ಪ್ರೋಮೋನ ಹಂಚಿಕೊಂಡಿದೆ. ಕನ್ನಡ ವರ್ಷನ್​ನಲ್ಲೇ ಸಿನಿಮಾ ಪ್ರಸಾರ ಕಾಣಲಿದೆ.

ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬಂತು. ಈ ಚಿತ್ರ ಥಿಯೇಟರ್​​ನಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು 1,700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರವು ಆ ಬಳಿಕ ಒಟಿಟಿಯಲ್ಲಿ ಬಿಡುಗಡೆ ಕಂಡಿತು.

ಈಗ ಈ ಚಿತ್ರದ ಕನ್ನಡ ವರ್ಷನ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ‘ಬರ್ತಿದೆ ವೈಲ್ಡ್ ಬ್ಲಾಕ್‍‍ಬಸ್ಟರ್ ಸಿನಿಮಾ. ಪುಷ್ಪ 2 ಸಿನಿಮಾ, ಶೀಘ್ರದಲ್ಲಿ’ ಎಂದು ಕಲರ್ಸ್​ ಕನ್ನಡ ಪ್ರೋಮೋ ಹಂಚಿಕೊಂಡು ಅದಕ್ಕೆ ಕ್ಯಾಪ್ಶನ್ ನೀಡಿದೆ. ಅನೇಕರು ಈ ಸಿನಿಮಾದ ಪ್ರಸಾರ ದಿನಾಂಕ ಘೋಷಣೆ ಮಾಡಿ ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ.

ಹಬ್ಬ-ಹರಿದಿನಗಳಂದು ಸೂಪರ್ ಹಿಟ್ ಚಿತ್ರಗಳನ್ನು ಪ್ರಸಾರ ಮಾಡೋದು ವಾಡಿಕೆ. ಅಂತೆಯೇ, ‘ಭೀಮ’ ಚಿತ್ರ ಕಲರ್ಸ್ ಕನ್ನಡದಲ್ಲಿ ಯುಗಾದಿ ಪ್ರಯುಕ್ತ ಮಾರ್ಚ್ 30ರಂದು ಸಂಜೆ 7.30ಕ್ಕೆ  ಪ್ರಸಾರ ಕಾಣಲಿದೆ ಎಂದು ತಿಳಿಸಲಾಗಿದೆ. ಹೀಗಿರುವಾಗಲೇ ಮತ್ತೊಂದು ಸಿನಿಮಾದ ಪ್ರಸಾರ ಕಾಣಲಿದೆ ಎಂದು ಘೋಷಣೆ ಮಾಡಲಾಗಿದೆ.

‘ಪುಷ್ಪ’ ಚಿತ್ರದ ಮುಂದುವರಿದ ಭಾಗವಾಗಿ ‘ಪುಷ್ಪ 2’ ಸಿನಿಮಾ ಸಿದ್ಧವಾಯಿತು. ಈ ಚಿತ್ರಕ್ಕೆ ಇನ್ನು ಮೂರನೇ ಭಾಗ ಕೂಡ ಬರಲಿದೆ. ‘ಮೈತ್ರಿ ಮೂವೀ ಮೇಕರ್ಸ್’ ಚಿತ್ರವನ್ನು ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಮಾಡಿದೆ. ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಪಾತ್ರದಲ್ಲಿ ಗಮನ ಸೆಳೆದರು. ಕನ್ನಡದ ನಟಿ ರಶ್ಮಿಕಾಗೂ ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ.