
ಕೆಕೆಆರ್ ವಿರುದ್ಧ ನಡೆದ 2025 ರ ಐಪಿಎಲ್ನ ಮೊದಲ ಪಂದ್ಯ ವಿರಾಟ್ ಕೊಹ್ಲಿಗೆ ಐತಿಹಾಸಿಕ ಪಂದ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕಿಂಗ್ ಕೊಹ್ಲಿ 400 ಟಿ20 ಪಂದ್ಯಗಳನ್ನು ಆಡಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಮಾತ್ರ ಕೊಹ್ಲಿಗಿಂತ ಮುಂದಿದ್ದಾರೆ. ರೋಹಿತ್ ಈ ಸ್ವರೂಪದಲ್ಲಿ 448 ಪಂದ್ಯಗಳನ್ನು ಆಡಿದ್ದರೆ, ಕಾರ್ತಿಕ್ 412 ಪಂದ್ಯಗಳನ್ನು ಆಡಿದ್ದಾರೆ. ತಮ್ಮ 400ನೇ ಟಿ20 ಪಂದ್ಯವನ್ನು ಇನ್ನಷ್ಟು ಸ್ಮರಣೀಯಗೊಳಿಸಿರುವ ವಿರಾಟ್ ಕೊಹ್ಲಿ ಕೇವಲ 30 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಪೂರೈಸಿದ್ದಲ್ಲದೆ ಅಜೇಯ 59 ರನ್ ಕೂಡ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಏತನ್ಮಧ್ಯೆ, ಈ ಅರ್ಧಶತಕದೊಂದಿಗೆ ವಿರಾಟ್ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ 1000 ರನ್‌ಗಳನ್ನು ಪೂರ್ಣಗೊಳಿಸಿದ ದಾಖಲೆಯನ್ನು ಬರೆದಿದ್ದಾರೆ. ಡೇವಿಡ್ ವಾರ್ನರ್ ಮತ್ತು ರೋಹಿತ್ ನಂತರ ಈ ಸಾಧನೆ ಮಾಡಿ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದರೊಂದಿಗೆ ಕೊಹ್ಲಿ ನಾಲ್ಕು ವಿಭಿನ್ನ ಐಪಿಎಲ್ ತಂಡಗಳಾದ ಸಿಎಸ್‌ಕೆ, ಡಿಸಿ, ಕೆಕೆಆರ್ ಮತ್ತು ಪಿಬಿಕೆಎಸ್ ವಿರುದ್ಧ 1000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.