ಹೊಸ ಅಣು ವಿದ್ಯುತ್ ಸ್ಥಾವರ ರಾಜಸ್ಥಾನದಲ್ಲಿ ಕಾರ್ಯಾರಂಭ

ನವದೆಹಲಿ, ಮಾರ್ಚ್ 18: ಭಾರತದ ಎನ್​​ಪಿಸಿಐಎಲ್ ಸಂಸ್ಥೆ ರಾಜಸ್ಥಾನದಲ್ಲಿ ನಿರ್ಮಿಸಿದ 700 ಮೆಗಾ ವ್ಯಾಟ್ ಪರಮಾಣು ವಿದ್ಯುತ್ ಸ್ಥಾವರವನ್ನು ನಿನ್ನೆ ಸೋಮವಾರ ಲೋಕಾರ್ಪಣೆ ಮಾಡಲಾಗಿದೆ. ಎನ್​​ಪಿಸಿಎಲ್ ನಿರ್ಮಿಸಿ ಲೋಕಾರ್ಪಣೆ ಮಾಡಿರುವ ಮೂರನೇ ನ್ಯೂಕ್ಲಿಯಾರ್ ರಿಯಾಕ್ಟರ್ ಇದಾಗಿದೆ. ಗುಜರಾತ್​​ನ ಕಾಕರಪಾರ್​ನಲ್ಲಿ ಎರಡು ಅಣು ವಿದ್ಯುತ್ ಸ್ಥಾವರ ನಿರ್ಮಿಸಲಾಗಿದೆ. ಈ ಮೂರೂ ಸ್ಥಾವರದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಗ್ರಿಡ್​​ಗೆ ಸಂಪರ್ಕ ಕೊಡಲಾಗಿದೆ.

ರಾಜಸ್ಥಾನದಲ್ಲಿ ಅಣು ವಿದ್ಯುತ್ ಸ್ಥಾವರ ಕಾರ್ಯಾರಂಭವಾದಂತೆ ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನೆ ಸಾಮರ್ಥ್ಯ 8,880 ಮೆಗಾವ್ಯಾಟ್​​ಗೆ ಏರಿದಂತಾಗಿದೆ. ಅಂದರೆ, 8-9 ಗಿಗಾವ್ಯಾಟ್ (GW) ವಿದ್ಯುತ್ ಸಾಮರ್ಥ್ಯ ಹೊಂದಿದೆ.

ಭಾರತೀಯ ಪರಮಾಣು ವಿದ್ಯುತ್ ನಿಗಮ ದೇಶಾದ್ಯಂತ 700 ಮೆಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆಯ 16 ಪಿಎಚ್​​ಡಬ್ಲ್ಯುಆರ್ ಸ್ಥಾವರಗಳನ್ನು ನಿರ್ಮಿಸುತ್ತಿದೆ. ಈ ಪೈಕಿ ಈಗ ರಾಜಸ್ಥಾನದಲ್ಲಿ ನಿರ್ಮಿಸಲಾಗಿರುವುದು ಮೂರನೆಯದು. ಕರ್ನಾಟಕದ ಕೈಗಾ ಸೇರಿದಂತೆ ದೇಶದ ವಿವಿಧೆಡೆ ಇನ್ನೂ 13 ಅಣು ವಿದ್ಯುತ್ ಸ್ಥಾವರಗಳನ್ನು ಎನ್​​ಪಿಸಿಐಎಲ್ ನಿರ್ಮಿಸುತ್ತಿದೆ. ಇವೆಲ್ಲವೂ ಪೂರ್ಣಗೊಂಡಲ್ಲಿ ಭಾರತದ ಒಟ್ಟು ಪರಮಾಣ ವಿದ್ಯುತ್ ಸಾಮರ್ಥ್ಯ 17,980 ಮೆಗಾವ್ಯಾಟ್​​ಗೆ ಏರುತ್ತದೆ.

ಕರ್ನಾಟಕದ ಕೈಗಾದಲ್ಲಿ ಎರಡು ಯೂನಿಟ್

ಕಾರವಾರ ಸಮೀಪದ ಕೈಗಾದಲ್ಲಿ ಅಣು ವಿದ್ಯುತ್ ಉತ್ಪಾದನಾ ಕೇಂದ್ರ ಇದೆ. ಇಲ್ಲಿ 700 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಲಾಗುತ್ತದೆ. ಅಂದರೆ 1,400 ಮೆಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಹೆಚ್ಚುವರಿಯಾಗಿ ಇಲ್ಲಿ ಆಗುತ್ತದೆ.

ರಾಜಸ್ಥಾನದ ಮಹಿ ಬನಸ್ವಾರದಲ್ಲಿ ನಾಲ್ಕು, ಹರ್ಯಾಣದ ಗೋರಖಪುರ್​​ನಲ್ಲಿ ಎರಡು, ಮಧ್ಯಪ್ರದೇಶದ ಚುಟ್ಕದಲ್ಲಿ ಎರಡು, ತಮಿಳುನಾಡಿನ ಕೂಡಂಕುಲಂನಲ್ಲಿ ನಾಲ್ಕು, ಹಾಗೂ ಮಹಾರಾಷ್ಟ್ರದ ಜೈತಾಪುರ್​​ನಲ್ಲಿ ಆರು ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಭಾರತಕ್ಕಿಂತ ಹೆಚ್ಚು ಅಣು ವಿದ್ಯುತ್ ಶಕ್ತಿ ಇರುವ ದೇಶಗಳು…

  • ಅಮೆರಿಕ: 95 ಗಿಗಾವ್ಯಾಟ್
  • ಫ್ರಾನ್ಸ್: 61 ಗಿಗಾವ್ಯಾಟ್
  • ಚೀನಾ: 50 ಗಿಗಾವ್ಯಾಟ್
  • ರಷ್ಯಾ: 29 ಗಿಗಾವ್ಯಾಟ್
  • ಜಪಾನ್: 31 ಗಿಗಾವ್ಯಾಟ್

ಅಣು ವಿದ್ಯುತ್​ನಿಂದ ಏನು ಉಪಯೋಗ..?

ಪರಮಾಣು ವಿದ್ಯುತ್ ರಿನಿವಬಲ್ ಎನರ್ಜಿ ಅಲ್ಲ. ಆದರೆ, ಮಾಲಿನ್ಯ ಇಲ್ಲದ ಶುದ್ಧ ಶಕ್ತಿಯನ್ನು ಒದಗಿಸುತ್ತದೆ. ನ್ಯೂಕ್ಲಿಯಾರ್ ಫಿಶನ್ ತಂತ್ರಜ್ಞಾನ ಬಳಸಿ ಯುರೇನಿಯಂ ಅಣುವನ್ನು ವಿಭಜಿಸಲಾಗುತ್ತದೆ. ಇದರಿಂದ ಅಸಾಮಾನ್ಯ ಉಷ್ಣ ಉತ್ಪತ್ತಿಯಾಗುತ್ತದೆ. ಇದರಿಂದ ಬರುವ ಬಿಸಿ ಹಬೆಯು ಟರ್ಬೈನ್ ಅನ್ನು ತಿರುವಂತೆ ಮಾಡಿ ಆ ಮೂಲಕ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಾಲಿನ್ಯಕಾರಕ ವಸ್ತುಗಳು ಹೊರಹೊಮ್ಮುವುದಿಲ್ಲ.