VIDEO: ಅಳುತ್ತಿದ್ದ ಅಭಿಮಾನಿಯನ್ನು ಸಮಾಧಾನ ಮಾಡಿದ ಕೆಎಲ್ ರಾಹುಲ್

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 4 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. ವಿರಾಟ್ ಕೊಹ್ಲಿ (84) ಔಟಾದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 34 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಶೇಷ ಎಂದರೆ ಕೆಎಲ್ ರಾಹುಲ್ 49ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅತ್ತ ಕೆಎಲ್​ಆರ್​ ಸಿಕ್ಸ್ ಸಿಡಿಸುತ್ತಿದ್ದಂತೆ ಇತ್ತ ಕಡೆಯಿಂದ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದರು.

ಕುಣಿಯುತ್ತಾ ಕುಪ್ಪಳಿಸುತ್ತಾ ಓಡಿ ಬಂದ ಅಭಿಮಾನಿಯು ನೇರವಾಗಿ ಹೋಗಿ ಕೆಎಲ್ ರಾಹುಲ್ ಅವರನ್ನು ತಬ್ಬಿಕೊಂಡಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಗೆಲುವಿನ ಖುಷಿಯಲ್ಲಿ ಅಭಿಮಾನಿಯು ಆನಂದಬಾಷ್ಪ ಸುರಿಸುತ್ತಿದ್ದರು. ಇದನ್ನ ಕಂಡ ಕೆಎಲ್ ರಾಹುಲ್ ಅಭಿಮಾನಿಯನ್ನು ಸಮಾಧಾನ ಪಡಿಸಿದರು. ಅಷ್ಟರಲ್ಲಾಗಲೇ ಮೈದಾನಕ್ಕೆ ಬಂದ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದರು. ಇದೀಗ ಕೆಎಲ್ ರಾಹುಲ್ ಫ್ಯಾನ್​ನ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಸ್ಟೀವ್ ಸ್ಮಿತ್ (71) ಹಾಗೂ ಅಲೆಕ್ಸ್ ಕ್ಯಾರಿ (63) ಆಕರ್ಷಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ 264 ರನ್​ಗಳಿಸಿ ಆಲೌಟ್ ಆಯಿತು.

265 ರನ್​ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ 84 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 45 ರನ್ ಚಚ್ಚಿದರು. ಇನ್ನು ಅಂತಿಮ ಹಂತದಲ್ಲಿ ಕೆಎಲ್ ರಾಹುಲ್ 42 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ತಂಡವು 48.1 ಓವರ್​ಗಳಲ್ಲಿ 267 ರನ್ ಬಾರಿಸಿ 4 ವಿಕೆಟ್​ಗಳ ಜಯ ಸಾಧಿಸಿತು.