ಮರುಕಳಿಸಿದ ಇತಿಹಾಸ… ಫೈನಲ್​ನಲ್ಲಿ ಯಾರ ಮುಖಾಮುಖಿ?

Champions Trophy 2025: ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಪಂದ್ಯ ಮುಗಿದು, ಇದೀಗ ನಾಕೌಟ್ ಹಂತದ ಮ್ಯಾಚ್​ಗಳಿಗೆ ವೇದಿಕೆ ಸಿದ್ಧವಾಗಿದೆ. ಇಂದು (ಮಾ.4) ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದರೆ, ನಾಳೆ (ಮಾ.5) ಜರುಗಲಿರುವ ಮ್ಯಾಚ್​ನಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ.

ಚಾಂಪಿಯನ್ಸ್ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು (ಮಾ.4) ನಡೆಯಲಿರುವ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ಲಾಹೋರ್​ನಲ್ಲಿ ಜರುಗಲಿರುವ ಎರಡನೇ ಸೆಮಿಫೈನಲ್​ನಲ್ಲಿ ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಲಿದೆ.

ವಿಶೇಷ ಎಂದರೆ 2023 ರ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಆಡಿದ್ದ ತಂಡಗಳೇ ಈ ಬಾರಿ ಕೂಡ ಸೆಮಿಫೈನಲ್​ಗೇರಿದೆ. ಅದರಲ್ಲೂ 2015 ರ ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಿದ್ದ ತಂಡಗಳೇ ಈ ಬಾರಿ ಪರಸ್ಪರ ಸೆಣಸುತ್ತಿರುವುದು ಮತ್ತೊಂದು ವಿಶೇಷ.

2015 ರ ಏಕದಿನ ವಿಶ್ವಕಪ್​ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡ ಮುಖಾಮುಖಿಯಾಗಿತ್ತು. ಆಕ್ಲೆಂಡ್​ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು 281 ರನ್ ಕಲೆಹಾಕಿತ್ತು. ಮಳೆಯ ಕಾರಣ 43 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ನ್ಯೂಝಿಲೆಂಡ್​ಗೆ 298 ರನ್​ಗಳ ಗುರಿ ನೀಡಲಾಯಿತು. ಅದರಂತೆ ಕಿವೀಸ್ ಪಡೆ 42.5 ಓವರ್​ಗಳಲ್ಲಿ 299 ರನ್ ಬಾರಿಸಿ 4 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ ಮತ್ತೆ ಸೆಮಿಫೈನಲ್​ನಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲು ಸಜ್ಜಾಗಿದೆ.

ಇನ್ನು ದ್ವಿತೀಯ ಸೆಮಿಫೈನಲ್​ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸಿಡ್ನಿಯಲ್ಲಿ ನಡೆದ ಈ ಮ್ಯಾಚ್​ನಲ್ಲಿ ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 328 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 233 ರನ್​ಗಳಿಗೆ ಆಲೌಟ್ ಆಗಿ 95 ರನ್​ಗಳಿಂದ ಸೋಲೊಪ್ಪಿಕೊಂಡಿತು. ಇದೀಗ ಇದೇ ನಾಲ್ಕು ತಂಡಗಳು 10 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ನಾಕೌಟ್ ಹಂತದಲ್ಲಿ ಮುಖಾಮುಖಿಯಾಗುತ್ತಿದೆ.

ಅಂದರೆ 2015ರ ವಿಶ್ವಕಪ್​ನಿಂದ ಹೊರದಬ್ಬಿದ ತಂಡಗಳನ್ನು ಸೋಲಿಸಿ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಸೌತ್ ಆಫ್ರಿಕಾ ಮತ್ತು ಭಾರತ ತಂಡಗಳ ಮುಂದಿದೆ. ಅದರಂತೆ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ 10 ವರ್ಷಗಳ ಹಿಂದಿನ ಲೆಕ್ಕವನ್ನು ಚುಕ್ತಾ ಮಾಡಲಿದ್ದಾರಾ ಕಾದು ನೋಡಬೇಕಿದೆ.