ಕೊಪ್ಪಳ: ನದಿಯಲ್ಲಿ ಡೈವ್ ಮಾಡುವ ಸೆಲ್ಫಿ ಹುಚ್ಚಿಗಾಗಿ ನೀರುಪಾಲಾಗಿದ್ದ ವೈದ್ಯೆಯ ಶವ ಪತ್ತೆಯಾಗಿದೆ. ಮೃತ ವೈದ್ಯೆಯನ್ನು ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ (26) ಎಂಬಿಬಿಎಸ್ ಪದವೀಧರೆ ಹಾಗೂ ಪ್ರತಿಭಾವಂತ ಭರತನಾಟ್ಯ ಕಲಾವಿದೆ ಎಂದು ಗುರುತಿಸಲಾಗಿದೆ.

ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಬುಧವಾರ ಮುಂಜಾನೆ ತುಂಗಾಭದ್ರಾ ನದಿಗೆ ಹೋಗಿ, ಕಲ್ಲುಬಂಡೆಗಳ ಮೇಲಿಂದ ಯುವತಿ ನದಿಗೆ ಜಿಗಿಯಲು ಸಿದ್ದವಾಗಿದ್ದಾಳೆ. ಆರಂಭದಲ್ಲಿ ವಿಡಿಯೋ ಮಾಡ್ತಿದ್ದ ಸ್ನೇಹಿತರಿಗೆ ಖುಷಿಯಿಂದಲೇ ಹಾಯ್ ಹೇಳಿದ್ದಾಳೆ. ಆದರೆ, ನದಿಗೆ ಜಿಗಿದ ಕೆಲವೇ ನಿಮಿಷಗಳಲ್ಲಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಳು.
ನೀರಿನಲ್ಲಿ ಧುಮುಕಿದ್ದ ಸ್ಥಳದಿಂದ 400 ಮೀ. ದೂರದಲ್ಲಿ ಗುರುವಾರ ಸಂಜೆ ವೇಳೆಗೆ ಶವವಾಗಿ ಪತ್ತೆಯಾಗಿದ್ದಾಳೆ. ಅನನ್ಯಾರಾವ್, ಹೈದ್ರಾಬಾದ್‌ನ ಮೇದಕ್ ಕ್ಷೇತ್ರದ ಶಾಸಕ ರೋಹಿತ್ ಮೈನಪಲ್ಲಿಯ ಸಂಬಂಧಿಯಾಗಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕೆ ಶಾಸಕರ ಕುಟುಂಬಸ್ಥರು, ಅನನ್ಯರಾವ್ ಕುಟುಂಬಸ್ಥರು ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆಗಿದ್ದೇನು?
ಅನನ್ಯ ಸ್ನೇಹಿತರ ಜೊತೆಗೆ ರಜೆ ಕಳೆಯಲು ಸ್ಥಳೀಯ ಪ್ರವಾಸಿ ತಾಣಗಳಾದ ಅಂಜನಾದ್ರಿ, ಪಂಪಾಸರೋವರ, ಸಣಾಪೂರ ಕೆರೆಗೆ ಭೇಟಿ ನೀಡಿ, ತುಂಗಭದ್ರ ನದಿಯ ದಡದಲ್ಲಿಯೇ ಇದ್ದ ರೆಸಾರ್ಟ್‌ನಲ್ಲಿ ಮಂಗಳವಾರ ರಾತ್ರಿ ಉಳಿದುಕೊಂಡಿದ್ದಳು. ಬುಧವಾರ ಮುಂಜಾನೆ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ, ಕಲ್ಲು ಬಂಡೆಯ ಮೇಲಿಂದ ನದಿಗೆ ಜಿಗಿದಿದ್ದಳು. ನದಿಯಲ್ಲಿ ಕಲ್ಲು ಬಂಡೆ ಹಾಗೂ ನದಿಯ ನೀರಿನ ರಭಸಕ್ಕೆ ಅನನ್ಯ ನೀರಿನಲ್ಲಿ ಮುಳುಗಿದ್ದಳು.
ದಡದಲ್ಲಿಯೇ ಇದ್ದ ಸ್ನೇಹಿತರು ಅನನ್ಯಾಳನ್ನು ಹುಡುಕಲು ಮುಂದಾಗಿದ್ದರು. ಕೆಲ ಕಾಲದವರೆಗೆ ಅನನ್ಯ ಅವರ ದೇಹ ಕಾಣಿಸಿಕೊಳ್ಳದೆ ಇರುವುದರಿಂದ ಗಾಬರಿಗೊಂಡು ಸ್ಥಳೀಯ ಹಾಗೂ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ನಡೆಸಲಾಗಿತ್ತು. ಮೃತದೇಹ ಪತ್ತೆಯಾಗದ ಕಾರಣ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರಿನಲ್ಲಿ ಅನನ್ಯ ದೇಹದ ಹುಡುಕಾಟ ನಡೆಸಿದ್ದರು.
ಅನನ್ಯಾ ಕಲ್ಲು ಬಂಡೆಯ ಮೇಲಿಂದ ನೀರಿಗೆ ಹಾರುವುದನ್ನು ಸ್ನೇಹಿತರು ವೀಡಿಯೋ ಮಾಡಿದ್ದರು. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.