Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

ದುಬೈ: ಚಾಂಪಿಯನ್ಸ್‌ ಟ್ರೋಫಿ ವಿಜೇತ ತಂಡ 2.24 ಮಿಲಿಯನ್‌ ಡಾಲರ್‌ (19.45 ಕೋಟಿ ರೂ.) ನಗದು ಬಹುಮಾನವನ್ನು ಪಡೆಯಲಿದೆ.ಇಂದು ಐಸಿಸಿ ಚಾಂಪಿಯನ್‌ ಟ್ರೋಫಿ ನಗದು ಬಹುಮಾನ ಮೊತ್ತವನ್ನು ಪ್ರಕಟಿಸಿದೆ. ಈ ಬಾರಿ ವಿಜೇತ ತಂಡ 2.24 ದಶಲಕ್ಷ ಡಾಲರ್‌ ಪಡೆದರೆ ರನ್ನರ್-ಅಪ್‌ ತಂಡ 1.12 ದಶಲಕ್ಷ ಡಾಲರ್‌ (9.75 ಕೋಟಿರೂ.) ಪಡೆಯಲಿದೆ.

ಈ ಬಾರಿ ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 6.9 ದಶಲಕ್ಷ ಡಾಲರ್‌ಗೆ (60  ಕೋಟಿ ರೂ,) ಏರಿಕೆಯಾಗಿದೆ. 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತ 53% ಏರಿದೆ. 2017 ರಲ್ಲಿ ಒಟ್ಟು ಬಹುಮಾನದ ಮೊತ್ತ 4.5 ದಶಲಕ್ಷ ಡಾಲರ್‌ ಆಗಿದ್ದರೆ ವಿಜೇತ ತಂಡಕ್ಕೆ 2.22 ದಶಲಕ್ಷ ಡಾಲರ್‌ ಸಿಕ್ಕಿತ್ತು.

ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 5,60,000 ಡಾಲರ್‌ (4.86 ಕೋಟಿ ರೂ.) ನೀಡಲಾಗುತ್ತದೆ. ತಂಡಗಳು ಆಡುವ ಪ್ರತಿಯೊಂದು ಪಂದ್ಯವು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖ್ಯವಾಗಿರುತ್ತದೆ. ಪ್ರತಿ ಪಂದ್ಯ ಗೆದ್ದರೂ 34,000 ಡಾಲರ್‌ (29.52 ಲಕ್ಷ ರೂ.) ನೀಡಲಾಗುತ್ತದೆ. ಐದನೇ ಅಥವಾ ಆರನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3,50,000 ಡಾಲರ್‌ ನೀಡಲಾಗುತ್ತದೆ. ಏಳನೇ ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳಿಗೆ 1,40,000 ಡಾಲರ್‌ ನೀಡಲಾಗುತ್ತದೆ.

1996 ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುತ್ತಿದ್ದು ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ. ಪಾಕಿಸ್ತಾನ ಹಾಗೂ ಯುಎಇನಲ್ಲಿ ಟೂರ್ನಿ ಆಯೋಜನೆಯಾಗಲಿದೆ. ಭಾರತ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ.

ಫೆ.19 ರಿಂದ ಪಂದ್ಯ ಟೂರ್ನಿ ಆರಂಭಗೊಂಡರೆ ಮಾ.9 ರಂದು ಫೈನಲ್‌ ಪಂದ್ಯ ನಡೆಯಲಿದೆ. 2025 ರ ಆವೃತ್ತಿಯಲ್ಲಿ ಎಂಟು ತಂಡಗಳು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿದೆ.

2027 ರಲ್ಲಿ ಟಿ20 ಮಾದರಿಯಲ್ಲಿ ಮಹಿಳೆಯರ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುವುದಾಗಿ ಐಸಿಸಿ ತಿಳಿಸಿದೆ.