
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದಾರೆ. ಅದರಂತೆ ಐಪಿಎಲ್ ಸೀಸನ್-18 ರಲ್ಲಿ ಪಾಟಿದಾರ್ ಸಾರಥ್ಯದಲ್ಲಿ ಆರ್ಸಿಬಿ ತಂಡ ಕಣಕ್ಕಿಳಿಯಲಿದೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. ಆದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಡುಪ್ಲೆಸಿಸ್ ಅವರನ್ನು ಆರ್ಸಿಬಿ ಬಿಡುಗಡೆ ಮಾಡಿತ್ತು. ಅಲ್ಲದೆ ಇದೀಗ ಫಾಫ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದಾರೆ.
ಹೀಗಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ನಾಯಕನನ್ನು ಪರಿಚಯಿಸಲು ನಿರ್ಧರಿಸಿದೆ. ಅದರಂತೆ 31 ವರ್ಷದ ರಜತ್ ಪಾಟಿದಾರ್ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಪಾಟಿದಾರ್ ದೇಶೀಯ ಅಂಗಳದಲ್ಲಿ ಮಧ್ಯ ಪ್ರದೇಶ್ ತಂಡವನ್ನು ಮುನ್ನಡೆಸಿ ಅನುಭವ ಹೊಂದಿದ್ದಾರೆ. ಈ ಅನುಭವವನ್ನು ಪರಿಗಣಿಸಿ ರಜತ್ಗೆ ನಾಯಕತ್ವ ನೀಡಲು ಆರ್ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.
2021 ರಿಂದ ಆರ್ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 24 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 7 ಅರ್ಧಶತಕಗಳೊಂದಿಗೆ ಒಟ್ಟು 799 ರನ್ ಕಲೆಹಾಕಿದ್ದಾರೆ. ಆದರೆ ಈ ಬಾರಿ ನಾಯಕತ್ವದೊಂದಿಗೆ ರಜತ್ ಪಾಟಿದಾರ್ ಆರ್ಸಿಬಿ ಪರ ಕಣಕ್ಕಿಳಿಯಲಿರುವುದು ವಿಶೇಷ.