
ನವದೆಹಲಿ: ‘ಸಂವಿಧಾನವನ್ನು ಹತ್ತಿಕ್ಕುವ’ ಬಗ್ಗೆ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯಲ್ಲಿ ದೇವ್ ಆನಂದ್ ಮತ್ತು ಕಿಶೋರ್ ಕುಮಾರ್ ಅವರನ್ನು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ರಾಜ್ಯಸಭಾ ಅಧಿವೇಶನದಲ್ಲಿ ಮಾಡಿದ ಭಾಷಣದ ವೇಳೆ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾತನಾಡಿದ್ದಾರೆ. ತುರ್ತು ಪರಿಸ್ಥಿತಿಯನ್ನು ಟೀಕಿಸಿದ್ದಕ್ಕೆ ಬಾಲಿವುಡ್ ಹಿರಿಯ ನಟ ದೇವ್ ಆನಂದ್ ಅವರ ಚಲನಚಿತ್ರಗಳನ್ನು ನಿಷೇಧಿಸಲಾಗಿತ್ತು. ಆಗಿನ ಖ್ಯಾತ ಗಾಯಕ ಕಿಶೋರ್ ಕುಮಾರ್ ಕಾಂಗ್ರೆಸ್ ಪರವಾಗಿ ಹಾಡಲು ನಿರಾಕರಿಸಿದರು. ಇದರ ಪರಿಣಾಮವಾಗಿ, ಕಿಶೋರ್ ಕುಮಾರ್ ಅವರ ಎಲ್ಲಾ ಹಾಡುಗಳನ್ನು ಆಕಾಶವಾಣಿಯಲ್ಲಿ ನಿಷೇಧಿಸಲಾಯಿತು. ತುರ್ತು ಪರಿಸ್ಥಿತಿಯ ದಿನಗಳನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹಾಗೇ, ಜವಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮುಂಬೈನಲ್ಲಿ ಕಾರ್ಮಿಕರ ಮುಷ್ಕರ ನಡೆಯಿತು. ಆ ಮುಷ್ಕರದ ಸಮಯದಲ್ಲಿ ಪ್ರಸಿದ್ಧ ಕವಿ ಮಜ್ರೂಹ್ ಸುಲ್ತಾನಪುರಿ ಒಂದು ಕವಿತೆಯನ್ನು ವಾಚಿಸಿದರು. ಇದರ ನಂತರ ಅವರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಪ್ರತಿಭಟನಾ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಸಿದ್ಧ ನಟ ಬಲರಾಜ್ ಸಾಹ್ನಿಯನ್ನೂ ಜೈಲಿಗೆ ಹಾಕಲಾಯಿತು. ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಅವರು ವೀರ ಸಾವರ್ಕರ್ ಕುರಿತಾದ ಒಂದು ಕವಿತೆ ಬರೆದಿದ್ದರು, ಅದನ್ನು ಆಕಾಶವಾಣಿಯಲ್ಲಿ ಹಾಡಲು ಬಯಸಿದ್ದರು. ಆದರೆ ಅವರನ್ನು ಆಕಾಶವಾಣಿಯಿಂದ ಜೀವಿತಾವಧಿಯವರೆಗೆ ನಿಷೇಧಿಸಲಾಯಿತು ಎಂದಿದ್ದಾರೆ.



