‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಿಂದ ಭವ್ಯಾ ಹೊರ ಹೋಗಿದ್ದೇಕೆ? ಇಲ್ಲಿದೆ ಅಸಲಿ ಕಾರಣ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭಾಗವಹಿಸಿದ್ದ ಭವ್ಯಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಆಫರ್ ಪಡೆದಿದ್ದರು. ಆದರೆ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಅವರಿಗೆ ತೀವ್ರ ಅನಾರೋಗ್ಯ ಕಾಡಿತು, ಹೀಗಾಗಿ ಶೋನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಅವರು ಟಾಪ್ 6ರಲ್ಲಿ ಕೂಡ ಇದ್ದರು. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರಿಗೆ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲಿ ಭಾಗಿ ಆಗಲು ಆಫರ್ ಬಂತು. ಇದನ್ನು ಅವರು ಖುಷಿಯಿಂದ ಒಪ್ಪಿದರು. ಆದರೆ, ದೊಡ್ಮನೆಯಿಂದ ಹೊರ ಬಂದ ಬಳಿಕ ಅವರು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಅವರೇ ಈ ಬಗ್ಗೆ ಮಾತನಾಡಿದ್ದಾರೆ.

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಟಾಸ್ಕ್​ಗಳನ್ನು ಆಡಿ ಗಮನ ಸೆಳೆದರು. ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಲ್ಲೂ ಅವರು ಪುರುಷ ಸ್ಪರ್ಧಿಗೆ ಟಫ್ ಕಾಂಪಿಟೇಷನ್ ಕೊಡಬಹುದು ಎಂದು ಅನೇಕರು ಊಹಿಸಿದರು. ಪ್ರೋಮೋಗಳು ರಿಲೀಸ್ ಆದಾಗ ಭವ್ಯಾ ಗೌಡ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅವರು ಈ ರಿಯಾಲಿಟಿ ಶೋನಿಂದ ಹೊರ ನಡೆದಿರಬಹುದು ಎಂದು ಎಲ್ಲರೂ ಊಹಿಸಿದರು. ಊಹಿಸಿದಂತೆಯೇ ಆಗಿದೆ.

ಭವ್ಯಾ ಗೌಡ ಅವರು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಿಂದ ಹೊರ ಬಂದಿರೋದು ನಿಜ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ಈ ರಿಯಾಲಿಟಿ ಶೋನ ಶೂಟ್​ನಲ್ಲಿ ಭಾಗಿ ಆಗಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಅವರಿಗೆ ತೀವ್ರ ಅನಾರೋಗ್ಯ ಕಾಡಿತ್ತು. ಹೀಗಾಗಿ, ಅವರು ಶೋನಲ್ಲಿ ಭಾಗಿ ಆಗೋಕೆ ಸಾಧ್ಯ ಆಗಿಲ್ಲ.

‘ಶೋನಿಂದ ಹೊರ ಬಂದ ಬಳಿಕ ನನಗೆ ಜ್ವರ ಕಾಣಿಸಿತು. ಇದೇ ಸಂದರ್ಭದಲ್ಲಿ ರಿಯಾಲಿಟಿ ಶೋನ ಶೂಟ್ ಕೂಡ ಶುರುವಾಯಿತು. ಅನಾರೋಗ್ಯದ ಕಾರಣ ಶೂಟ್​ನಲ್ಲಿ ಭಾಗಿ ಆಗಲು ಸಾಧ್ಯವಾಗಿಲ್ಲ. ಈ ರೀತಿಯ ಅವಕಾಶ ಸಿಕ್ಕಾಗ ಯಾರು ತಾನೆ ಬಿಡುತ್ತಾರೆ? ತೀವ್ರ ಅನಿವಾರ್ಯತೆ ಎದುರಾಗಿದ್ದಕ್ಕೆ ಶೋ ಬಿಟ್ಟೆ’ ಎಂದಿದ್ದಾರೆ ಭವ್ಯಾ ಗೌಡ.

ಭವ್ಯಾ ಗೌಡ ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಪ್ರಾಜೆಕ್ಟ್​ನ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಬಿಗ್ ಬಾಸ್​ನಿಂದ ಅವರ ಜನಪ್ರಿಯತೆ ಹೆಚ್ಚಿದೆ.