ದೇಶೀಯ ಅಂಗಳದಲ್ಲಿ ಇತಿಹಾಸ ನಿರ್ಮಿಸಿದ ಕರುಣ್ ನಾಯರ್

ದೇಶೀಯ ಅಂಗಳದ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಮುಂದಾಳತ್ವದ ವಿದರ್ಭ ತಂಡವನ್ನು ಮಣಿಸಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಸೋಲಿನ ಹೊರತಾಗಿಯೂ ಇಡೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕರುಣ್ ನಾಯರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಶೇಷ ಎಂದರೆ ಈ ಭರ್ಜರಿ ಪ್ರದರ್ಶನದೊಂದಿಗೆ ಕರುಣ್ ನಾಯರ್ ದೇಶೀಯ ಅಂಗಳದಲ್ಲಿ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ. ಅದು ಕೂಡ ನಾಯಕನಾಗಿ ಬರೋಬ್ಬರಿ 779 ರನ್​ಗಳನ್ನು ಕಲೆಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ವಿಜಯ ಹಝಾರೆ ಟೂರ್ನಿಯ ಒಂದೇ ಸೀಸನ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ದಾಖಲೆ ಇದೀಗ ಕರುಣ್ ಪಾಲಾಗಿದೆ.

ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಮಹಾರಾಷ್ಟ್ರ ತಂಡದ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಹೆಸರಿನಲ್ಲಿತ್ತು. 2022ರ ಸೀಸನ್​ನಲ್ಲಿ ರುತುರಾಜ್ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿ ಒಟ್ಟು 660 ರನ್ ಕಲೆಹಾಕಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಕರುಣ್ ಅಳಿಸಿ ಹಾಕಿದ್ದಾರೆ.

ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲಿ ವಿದರ್ಭ ತಂಡದ ನಾಯಕರಾಗಿ ಕಾಣಿಸಿಕೊಂಡ ಕರುಣ್ ನಾಯರ್ 8 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 5 ಶತಕ ಸಿಡಿಸುವ ಮೂಲಕ ಒಟ್ಟು 779 ರನ್ ಕಲೆಹಾಕಿದ್ದಾರೆ. ಈ ರನ್​ ರಾಶಿಯೊಂದಿಗೆ ವಿಜಯ ಹಝಾರೆ ಟೂರ್ನಿಯ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂತಹದೊಂದು ಅಮೋಘ ಪ್ರದರ್ಶನದೊಂದಿಗೆ ಕರುಣ್ ನಾಯರ್ ವಿದರ್ಭ ತಂಡವನ್ನು ಫೈನಲ್​ಗೇರಿಸಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಕರುಣ್ ಕೇವಲ 27 ರನ್​ಗಳಿಸಿ ಔಟಾಗಿದ್ದು ವಿದರ್ಭ ಪಾಲಿಗೆ ಮುಳುವಾಯಿತು. ಇದರ ಸಂಪೂರ್ಣ ಲಾಭ ಪಡೆದ ಕರ್ನಾಟಕ ತಂಡವು 36 ರನ್​ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.