ಮುಡಾ ಹಗರಣ: ಕೋಕನಟ್ ಕೋಡ್ವರ್ಡ್ ಬಳಸಿ ಅಕ್ರಮ ವ್ಯವಹಾರ, ಇಡಿ ತನಿಖೆಯಲ್ಲಿ ಬಯಲು

ಮೈಸೂರು, ಜನವರಿ 19: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಈ ಹಿಂದೆ ಇಡಿ (ED) ದಾಳಿಗೆ ಒಳಗಾಗಿದ್ದ ಮೈಸೂರು ಮೂಲದ ಬಿಲ್ದಡ್​ ಜಯರಾಮ್​ ಕೋಕನಟ್ ಕೋಡ್ವರ್ಡ್​ ಬಳಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದನು ಎಂದು ಜಾರಿ ನಿರ್ದೇಶನಾಯಲ ಪತ್ತೆ ಹಚ್ಚಿದೆ.

ಮುಡಾದಲ್ಲಿ ನಡೆದಿರುವ ಹಗರಣದಲ್ಲಿ ಬಿಲ್ಡರ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿದ್ದ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಇಲ್ಲಿ ಸಾಕಷ್ಟು ಕಪ್ಪು ಹಣದ ವ್ಯವಹಾರ ಕೂಡ ನಡೆದಿದ್ದು, ಇದಕ್ಕೆ ಜಯರಾಮ್ ಕೋಕನಟ್ ​ಎಂದು ಕೋಡ್ವರ್ಡ್ ಬಳಸುತ್ತಿದ್ದನು ಎಂದು ಇಡಿ ತನಿಖೆ ವೇಳೆ ಬಯಲಾಗಿದೆ.

1 ಕೋಕನಟ್ಎಂದರೆ 1 ಲಕ್ಷ ರೂ. 50 ಕೋಕನಟ್​ ಎಂದರೆ 50 ಲಕ್ಷ ರೂ. ಮತ್ತು 100 ಕೋಕನಟ್​ ಎಂದರೆ 1 ಕೋಟಿ ಎಂದು ಕೋಡ್ವರ್ಡ್ ಬಳಸುತ್ತಿದ್ದನು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

300 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಬಳಿಕ, ಇಡಿ ಅಧಿಕಾರಿಗಳು 631 ನಿವೇಶನಗಳ ವಿವರ ಕೇಳಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ 631 ನಿವೇಶನಗಳ ಅಕ್ರಮದಲ್ಲಿ ಬಹುತೇಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಭಾಗಿಯಾಗಿದ್ದಾರೆ. ಇದರಲ್ಲಿ, ಮುಡಾ ಮಾಜಿ ಆಯುಕ್ತರಿಗೆ ಸೇರಿದ 198 ಬೇನಾಮಿ ನಿವೇಶನಗಳಿವೆ ಎಂದು ತಿಳಿದುಬಂದಿದೆ.

ಅದೇ ರೀತಿ ಮುಡಾದ ಅಧಿಕಾರಿ ಒಬ್ಬರಿಗೆ ಅಕ್ರಮವಾಗಿ 92 ನಿವೇಶನಗಳನ್ನು ಹಾಗೂ ಮೈಸೂರಿನ ಎಂಎಲ್​ಸಿ ಒಬ್ಬರಿಗೆ 128 ನಿವೇಶನಗಳನ್ನು ಅಕ್ರಮವಾಗಿ ಬದಲಿ ನಿವೇಶನ ಹಾಗೂ ಬಿಟ್ ಲ್ಯಾಡ್ ಮೂಲಕ ನೀಡಲಾಗಿದೆ. ನಿವೇಶನಗಳ ವ್ಯವಹಾರದಲ್ಲಿ ಕಪ್ಪು ಹಣ ವರ್ಗಾವಣೆ ಕೂಡ ನಡೆದಿರುವ ಮಾಹಿತಿ ಸಿಕ್ಕಿದೆ. ಇದರಿಂದ 631 ನಿವೇಶನಗಳ ವಿವವರವನ್ನು ತುರ್ತಾಗಿ ನೀಡಿ ಅಂತ ಮುಡಾ ಆಯುಕ್ತರಿಗೆ ಇಡಿ ಪತ್ರ ಬರೆದಿದೆ. ಇಡಿ ತನಿಖೆ ಇದೀಗಾ ಮತ್ತೆ ಚುರುಕಾಗಿದ್ದು, ಮುಡಾ ಭ್ರಷ್ಟರಿಗೆ ಮತ್ತೆ ನಡುಕ ಶುರುವಾಗಿದೆ.