ಬೆಂಗಳೂರು, ಜನವರಿ 8: ಎಚ್ಎಂಪಿವಿ ವೈರಸ್ ಹರಡುವಿಕೆ ತಡೆ ಸಂಬಂಧ ಸೋಮವಾರ ಆರೋಗ್ಯ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ಕೇಂದ್ರ ಸರ್ಕಾರ ಕೂಡ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ. ವೈರಸ್ ತಡೆಗೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಅಲರ್ಟ್ ಆಗಿದ್ದು, ಕೇಂದ್ರದಿಂದ ಸಂದೇಶ ಬರ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಆರೋಗ್ಯ ಇಲಾಖೆ ಸಭೆ ನಡೆಸಿದ್ದಾರೆ. ಮುಂಜಾಗರೂಕತೆ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಭಯ ಪಡುವ ಅಗತ್ಯ ಇಲ್ಲ, ಸದ್ಯ ಪರೀಕ್ಷೆ ಹೆಚ್ಚಿಸುವ ಅಗತ್ಯವೂ ಇಲ್ಲ ಎಂದು ಚರ್ಚೆಯಾಗಿರುವ ಬಗ್ಗೆ ತಿಳಿದುಬಂದಿದೆ.
ಚೀನಾ ವೈರಸ್ ಅಲ್ಲ: ಸಿದ್ದರಾಮಯ್ಯ
ಸಭೆಯ ಬಳಿಕ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪತ್ತೆಯಾಗಿರುವ ಎಚ್ಎಂಪಿವಿ ವೈರಸ್ ಚೀನಾದಿಂದ ಬಂದಿರುವುದಲ್ಲ. ಜನ ಭಯಪಡಬೇಕಾದ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದಾರೆ.
ಮಕ್ಕಳು ಹಾಗೂ ವೃದ್ಧರನ್ನೇ ಗುರಿಯಾಗಿಸಿ ಚೀನಾದಲ್ಲಿ ಹೆಚ್ಚುತ್ತಿದೆ ಎನ್ನಲಾಗಿರುವ ಹೆಚ್‌ಎಂಪಿವಿ ವೈರಸ್ ಭಾರತಕ್ಕೂ ಕಾಲಿಟ್ಟಿರುವ ಬಗ್ಗೆ ವರದಿಯಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಇಬ್ಬರು ಪುಟ್ಟ ಮಕ್ಕಳು ಸೋಂಕಿತರಾಗಿದ್ದಾರೆ. ಆದರೆ, ಆದು ಚೀನಾದಲ್ಲಿ ಪತ್ತೆಯಾಗಿರುವ ವೈರಸ್ ಅಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಯಾವ ರಾಜ್ಯದಲ್ಲಿ ಎಷ್ಟು ಮಂದಿಗೆ ಹೆಚ್‌ಎಂಪಿವಿ ವೈರಸ್ ಸೋಂಕು?
- ಕರ್ನಾಟಕ – 2
- ತಮಿಳುನಾಡು – 2
- ಮಹಾರಾಷ್ಟ್ರ – 2
- ಗುಜರಾತ್ – 1
- ದೇಶದಲ್ಲಿ ಒಟ್ಟು – 7
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಿಗೆ ಹೆಚ್ಎಂಪಿವಿ ಪಾಸಿಟಿವ್ ಆಗಿದ್ದರೆ, ತಮಿಳುನಾಡಿನಲ್ಲಿ ಇಬ್ಬರಲ್ಲಿ ಹೆಚ್ಎಂಪಿವಿ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 7 ವರ್ಷ ಮತ್ತು 13 ವರ್ಷದ ಇಬ್ಬರ ಬಾಲಕರಿಗೆ ಸೋಂಕು ತಗುಲಿದೆ. ಇನ್ನು ಗುಜರಾತ್‌ನ ಅಹಮದಾಬಾದ್‌ನಲ್ಲೂ ಒಂದು ಮಗು ಸೋಂಕಿಗೆ ಒಳಗಾಗಿದೆ.
ಹೈದರಾಬಾದ್‌ನಲ್ಲಿ ಮಂಗಳವಾರ ಮಕ್ಕಳ ವೈದ್ಯಕೀಯ ಸಂಘ ಸಭೆ ನಡೆಸಿದ್ದು, ದೇಶದೆಲ್ಲೆಡೆಯಿಂದ 48 ಸಾವಿರ ಮಕ್ಕಳ ವೈದ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಮಕ್ಕಳ ಆರೋಗ್ಯದ ಮೇಲೆ ಎಚ್ಎಂಪಿವಿ ವೈರಸ್ ಎಷ್ಟು ಅಪಾಯಕಾರಿ, ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಇತ್ತ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಬೇಕಾ? ಬೇಡವಾ ಎಂಬ ಆತಂಕದಲ್ಲಿದ್ದಾರೆ. ಆದರೂ ಮುಂಜಾಗ್ರತೆ ಕ್ರಮ ಕೈಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಜ್ವರ ಇದ್ದರೆ ಕಳುಹಿಸಲ್ಲ ಎಂದು ಬೆಂಗಳೂರಿನಲ್ಲಿ ಪೋಷಕರು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲೇ ಶಿವಮೊಗ್ಗದಲ್ಲಿ ಆರು ಮಕ್ಕಳಿಗೆ ಹೆಚ್‌ಎಂಪಿ ವೈರಸ್ ತಗುಲಿ, ಗುಣಮುಖರಾಗಿರುವುದು ಗೊತ್ತಾಗಿದೆ. ಒಂದರಿಂದ ಎರಡು ವರ್ಷದೊಳಗಿನ ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಬಗ್ಗೆ ಅಂದೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು ಎಂದು ಎಂಎಲ್‌ಸಿ ಹಾಗೂ ಮಕ್ಕಳ ತಜ್ಞವೈದ್ಯ ಡಾಕ್ಟರ್ ಧನಂಜಯ ಸರ್ಜಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಎಚ್‌ಎಂಪಿವಿ ವೈರಸ್ ಬಗ್ಗೆ ಭಯ ಬೇಡ. ಆದರೆ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ.