ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜ ನಿಧನ

ಶಿವಮೊಗ್ಗ, ಜನವರಿ 05: ಖ್ಯಾತ ಹಿರಿಯ ಸಾಹಿತಿ ಡಾ. ನಾ ಡಿಸೋಜ  ಅವರು ಇಂದು ಸಂಜೆ 7.50ಕ್ಕೆ ಅನಾರೋಗ್ಯ ಹಿನ್ನೆಲೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾ.ಡಿಸೋಜ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತೀವ್ರ ನಷ್ಟಉಂಟಾಗಿದೆ. ಗಣ್ಯರ ಅಗಲಿಕೆಗೆ ಹಲವರು ಸಂತಾಪ ಸೂಚಿಸಿದ್ದಾರೆ.

ಅವರ ಪಾರ್ಥಿವ ಶರೀರವನ್ನು ನಾಳೆ ಮಧ್ಯಾಹ್ನದ ನಂತರ ಸಾಗರದ ಅವರ ಸ್ವಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗುವುದು ಎಂದು ನಾ.ಡಿಸೋಜ ಅವರ ಪುತ್ರ ನವೀನ್ ನಾ.ಡಿಸೋಜ ತಿಳಿಸಿದ್ದಾರೆ.

ಡಾ. ನಾರ್ಬಟ್ ಡಿಸೋಜರವರು 1937 ಜೂನ್ 6ರಂದು ಜನಿಸಿದರು. ತಂದೆ ಎಫ್.ಪಿ.ಡಿಸೋಜ, ತಾಯಿ ರೂಪಿನಾ ಡಿಸೋಜ. ನಾ.ಡಿಸೋಜರವರು ಈವರೆಗೆ 37 ಕಾದಂಬರಿಗಳು, ನಾಲ್ಕು ನಾಟಕಗಳು, ಇಪ್ಪತ್ತೆಂಟು ಮಕ್ಕಳ ಕೃತಿಗಳು ಸೇರಿದಂತೆ ನೂರಾರು ಕತೆಗಳನ್ನು ಬರೆದಿದ್ದಾರೆ.

ಇವರ ಕಾದಂಬರಿ ‘ಕಾಡಿನ ಬೆಂಕಿ’ ಹಾಗೂ ‘ದ್ವೀಪ’ ಚಲನಚಿತ್ರಗಳಾಗಿ ‘ರಜತಕಮಲ’ ಹಾಗೂ ‘ಸ್ವರ್ಣಕಮಲ’ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಬಳುವಳಿ’ ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ. ‘ಸಾರ್ಕ್’ ದೇಶಗಳ ಸಾಹಿತಿಗಳ ಸಮ್ಮೇಳನದಲ್ಲಿ ಸ್ವಂತ ಕಥಾವಾಚನ ಮಾಡಿದ್ದರು.

ಪ್ರಶಸ್ತಿಗಳು

ಇವರ ‘ಮುಳುಗಡೆಯ ಊರಿಗೆ ಬಂದವರು’ ಕಿರು ಕಾದಂಬರಿಗೆ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ದೊರೆತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಸಂದೇಶ ಪ್ರಶಸ್ತಿ, ನವದೆಹಲಿ ಕಥಾ ಪ್ರಶಸ್ತಿ, ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ಮುಂತಾದವುಗಳಿಂದ ಪುರಸ್ಕೃತರಾಗಿದ್ದಾರೆ. 2014ರ ಜನವರಿಯಲ್ಲಿ ಮಡಿಕೇರಿಯಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ

ನಾ.ಡಿಸೋಜ ಅವರದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾ.ಡಿಸೋಜ ಅವರ ಕೊಡುಗೆ ಅನನ್ಯವಾದದ್ದು. ಶ್ರೀಯುತರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ‌ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ ಸೂಚಿಸಿದ್ದಾರೆ.