ಬೆಂಗಳೂರು, ಜನವರಿ 05: ಸರ್ಕಾರಿ ಬಸ್ಗಳ ಟಿಕೆಟ್ ದರ ಏರಿಕೆ ಸಾರ್ವಜನಿಕರ ಜೇಬು ಸುಡುತ್ತಿದೆ. 7 ರೂಪಾಯಿಂದ 115 ರೂ.ವರೆಗೆ ಟಿಕೆಟ್ ದರ ಏರಿಕೆಯಾಗಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಈ ನಡುವೆ ಆಟೋರಿಕ್ಷಾ (Auto) ಪ್ರಯಾಣ ದರ ಕೂಡ ಏರಿಕೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕೆಲ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ.
ಒಂದು ಕಿಲೋಮೀಟರ್ಗೆ 5 ರೂಪಾಯಿ, ಎರಡು ಕಿಲೋಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್ಗೆ 30 ರೂಪಾಯಿ ಇದೆ. ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.
ದರ ಏರಿಕೆ ಸಂಬಂಧ 2024ರ ಡಿಸೆಂಬರ್ 23 ರಂದು ಅಸೋಸಿಯೇಷನ್ಗಳ ಸಭೆ ಕರೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಯಿತು. ಈಗ ಮತ್ತೆ ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.
ಆದರೆ, ಆಟೋ ಸಂಘಟನೆಗಳಲ್ಲೇ ದರ ಏರಿಕೆ ಬಗ್ಗೆ ಒಮ್ಮತ್ತವಿಲ್ಲ. ಬೈಕ್ ಟ್ಯಾಕ್ಸಿ ಬ್ಯಾನ್ ಆಗುವವರೆಗೂ ಆಟೋ ಪ್ರಯಣಾ ದರ ಏರಿಕೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಚಾಲಕ ಸಂಘಟನೆಗಳಿಂದ ಒಂದೇ ಅಭಿಪ್ರಾಯ ನೀಡಿದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ದರ ಏರಿಕೆ ಮಾಡಲಿದ್ದಾರೆ.
ದರ ಏರಿಕೆ ಕಮಿಟಿಯಲ್ಲಿ ಯಾರೆಲ್ಲ ಇರುತ್ತಾರೆ?
ಬೆಂಗಳೂರು ನಗರ ಜಿಲ್ಲಾಧಿಕಾರಿ- ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಯನಗರ ಆರ್ಟಿಓ ಕಚೇರಿಯ ಓರ್ವ ಅಧಿಕಾರಿ- ಕಾರ್ಯದರ್ಶಿ ಹಾಗೂ ಟ್ರಾಫಿಕ್ ಡಿಸಿಪಿ (ಯಾವುದಾದರು ಒಂದು ವಿಭಾಗ) ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ, ಗ್ರಾಹಕರ ವೇದಿಕೆಯಿಂದ ಓರ್ವ ಅಧಿಕಾರಿ ಕಮಿಟಿ ಸದಸ್ಯರಾಗಿರುತ್ತಾರೆ.