ವಾಷಿಂಗ್ಟನ್: ಹೊಸ ವರ್ಷದ ದಿನದಂದು ದಕ್ಷಿಣ ಅಮೆರಿಕ ನಗರವಾದ ನ್ಯೂ ಓರ್ಲಿಯನ್ಸ್‌ನಲ್ಲಿ ಜನಸಂದಣಿ ಮೇಲೆ ಪಿಕಪ್ ಟ್ರಕ್ ನುಗ್ಗಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇತ್ತೀಚೆಗಷ್ಟೇ ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನರ ಗುಂಪಿನ ಮೇಲೆ ಕಾರು ಹರಿದು ಇಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು. ಇದೀಗ ಅದೇ ಮಾದರಿಯ ಘಟನೆ ಅಮೆರಿಕದಲ್ಲೂ ನಡೆದಿದೆ. ಅತಿ ವೇಗವಾಗಿ ಟ್ರಕ್ ಚಲಾಯಿಸಿದ ಚಾಲಕ ಅಪಘಾತ ನಡೆದ ಬಳಿಕ ಜನರ ಗುಂಪಿನತ್ತ ಏಕಾಏಕಿ ಗುಂಡು ಹಾರಿಸಿದ್ದು, ಪೊಲೀಸರೊಂದಿಗೂ ಗುಂಡಿನ ಚಕಮಕಿ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸದ್ಯಕ್ಕೆ ಸಾವು-ನೋವುಗಳ ಸಂಖ್ಯೆ ನಿಖರವಾಗಿಲ್ಲ. ಗಾಯಗೊಂಡ ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಘಟನೆಯ ದೃಶ್ಯಾವಳಿಗಳನ್ನು ಪ್ರತ್ಯಕ್ಷದರ್ಶಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೊಂದು ಹತ್ಯಾಕಾಂಡ ಎಂದು ಕರೆದಿದ್ದಾರೆ. ಟ್ರಕ್ ಚಾಲಕ ಹತ್ಯಾಕಾಂಡ ನಡೆಸಲೆಂದೇ ಉದ್ದೇಶಪೂರ್ಕವಾಗಿ ದಾಳಿ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.