ಕಳಪೆ ಪ್ರದರ್ಶನದ ನಡುವೆಯೂ ರೋಹಿತ್- ಕೊಹ್ಲಿಗೆ ವಿಶ್ರಾಂತಿ; ಕೈತಪ್ಪುತ್ತಾ ಚಾಂಪಿಯನ್ಸ್ ಟ್ರೋಫಿ?

India vs England ODI series: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಬಹುದು ಎಂದು ವರದಿಯಾಗಿದೆ. ಒಂದು ವೇಳೆ ಇದು ನಿಜವಾದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಸಿದ್ಧತೆಗೆ ಧಕ್ಕೆಯಾಗುವ ಸಾಧ್ಯತೆಯಿದೆ.ಈ ಇಬ್ಬರು ಆಟಗಾರರ ಇತ್ತೀಚಿನ ಪ್ರದರ್ಶನ ನಿರಾಶಾದಾಯಕವಾಗಿದ್ದು, ಈ ವಿಶ್ರಾಂತಿ ನಿರ್ಧಾರವು ಟೀಂ ಇಂಡಿಯಾದ ಪ್ರದರ್ಶನದ ಮೇಲೆ ಪ್ರಭಾವ ಬೀರಬಹುದು.

ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ವರ್ಷ ಅಭಿಮಾನಿಗಳಿಂದ ಹೊಗಳಿಸಿಕೊಂಡಿದ್ದಕ್ಕಿಂತ ತೆಗಳಿಸಿಕೊಂಡಿದ್ದೆ ಹೆಚ್ಚು. ಈ ಇಬ್ಬರು ಆಟಗಾರರು ಈ ವರ್ಷ ತಮ್ಮ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಇದೀಗ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ಈ ಇಬ್ಬರ ಪ್ರದರ್ಶನ ಅಟ್ಟರ್ ಫ್ಲಾಪ್. ಈ ನಡುವೆ ಅಭಿಮಾನಿಗಳ ಟೆನ್ಶನ್ ಅನ್ನು ಮತ್ತಷ್ಟು ಹೆಚ್ಚಿಸಿರುವ ಸುದ್ದಿಯೊಂದು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಮತ್ತು ವಿರಾಟ್​ಗೆ ಮುಂದಿನ ತಿಂಗಳು ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲ್ಲಿರುವ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಒಂದು ವೇಳೆ ಈ ಸುದ್ದಿ ನಿಜವಾದರೆ, ಈ ನಿರ್ಧಾರ ಟೀಂ ಇಂಡಿಯಾಕ್ಕೆ ದುಬಾರಿಯಾಗಬಹುದು. ಏಕೆಂದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಡ ಫೆಬ್ರವರಿಯಲ್ಲಿದ್ದು, ಅದೂ ಸಹ ಏಕದಿನ ಮಾದರಿಯಲ್ಲಿ ಮಾತ್ರ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜರು ಯಾವುದೇ ಸಿದ್ಧತೆ ಇಲ್ಲದೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದರೆ ತಂಡದ ಪರಿಸ್ಥಿತಿ ಏನು ಎಂಬುದು ಎಲ್ಲರ ಚಿಂತೆಗೆ ಕಾರಣವಾಗಿದೆ.

ದುಬಾರಿಯಾಗಲಿದೆ ವಿಶ್ರಾಂತಿ ನಿರ್ಧಾರ

ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ನಡೆಯಲಿರುವ ಪ್ರಸಕ್ತ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಮತ್ತು ವಿರಾಟ್ ಆಡಲಿದ್ದಾರೆ. ಇದರ ನಂತರ ಟೀಂ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆದರೆ ರೋಹಿತ್ ಹಾಗೂ ವಿರಾಟ್ ಈ ಮಾದರಿಗೆ ವಿದಾಯ ಹೇಳಿರುವುದರಿಂದ ಈ ಇಬ್ಬರು ಈ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ ಬಳಿಕ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಫೆಬ್ರವರಿಯಲ್ಲಿ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳ ಮುಂಚೆ ಈ ಸರಣಿ ನಡೆಯಲ್ಲಿರುವುದರಿಂದ ಈ ಐಸಿಸಿ ಟೂರ್ನಿಯ ತಯಾರಿಗೆ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿ ಉತ್ತಮ ಅವಕಾಶವಾಗಿದೆ. ಹೀಗಿರುವಾಗ ಈ ಇಬ್ಬರು ಆಟಗಾರರು ಈ ಸರಣಿಯಲ್ಲಿ ಆಡುವುದು ಅತ್ಯವಶ್ಯಕ. ಆದಾಗ್ಯೂ ಈ ಇಬ್ಬರಿಗೆ ವಿಶ್ರಾಂತಿ ನೀಡುತ್ತಿರುವುದು ಆಡಳಿತ ಮಂಡಳಿಯ ಮೇಲೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.

ಕೊನೆಯ ಏಕದಿನವನ್ನಾಡಿ ತಿಂಗಳುಗಳೇ ಕಳೆದಿವೆ

2024 ರಲ್ಲಿ ಭಾರತ ತಂಡವು ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮೂರು ಏಕದಿನ ಪಂದ್ಯಗಳಲ್ಲಿ ಒಂದು ಪಂದ್ಯವನ್ನೂ ಗೆದ್ದಿಲ್ಲ. ಮೊದಲ ಪಂದ್ಯ ಟೈ ಆಗಿದ್ದು, ನಂತರದ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಶ್ರೀಲಂಕಾ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯ ಕೊನೆಯ ಪಂದ್ಯವನ್ನು 7 ಆಗಸ್ಟ್ 2024 ರಂದು ಆಡಲಾಯಿತು. ಇದರಲ್ಲಿ ರೋಹಿತ್ 35 ರನ್ ಮತ್ತು ವಿರಾಟ್ 20 ರನ್ ಗಳಿಸಿದ್ದರು. ಅಂದಿನಿಂದ ಟೀಂ ಇಂಡಿಯಾ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಹಾಗೂ ವಿರಾಟ್ ಯಾವುದೇ ಪೂರ್ವಸಿದ್ಧತೆ ಇಲ್ಲದೆ ನೇರವಾಗಿ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶಿಸಿದರೆ, ಅವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಮತ್ತು ಅದು ಟೀಮ್ ಇಂಡಿಯಾದ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು.

ಭಾರತ-ಇಂಗ್ಲೆಂಡ್ ಏಕದಿನ ಸರಣಿ ವೇಳಾಪಟ್ಟಿ

ಜನವರಿಯಲ್ಲಿ ಇಂಗ್ಲೆಂಡ್, ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ಮೊದಲ 5 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ಏಕದಿನ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ, ಎರಡನೇ ಏಕದಿನ ಫೆಬ್ರವರಿ 9 ರಂದು ಕಟಕ್‌ನಲ್ಲಿ ಮತ್ತು ಮೂರನೇ ಏಕದಿನ ಪಂದ್ಯವು ಜನವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರ ನಂತರ, ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಫೆ.20ರಿಂದ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಟೀಂ ಇಂಡಿಯಾದ ಅಭಿಯಾನ ಆರಂಭವಾಗಲಿದೆ.