ಶನಿವಾರ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

ನವದೆಹಲಿ: ದೇಶದ ಅಭಿವೃದ್ಧಿಯ ಹರಿಕಾರ, ಆರ್ಥಿಕತೆಯ ವಾಸ್ತುಶಿಲ್ಪಿ, ರಾಜಕಾರಣಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಿವಾಸದಲ್ಲೇ ಚಿಕಿತ್ಸೆ ಕೊಡಲಾಗ್ತಿತ್ತು. ಆದರೆ, ಗುರುವಾರ ರಾತ್ರಿ 8 ಗಂಟೆ 06 ನಿಮಿಷದ ಸುಮಾರಿನಲ್ಲಿ ಪ್ರಜ್ಞಾಹೀನರಾದರು.

ತಕ್ಷಣವೇ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ರಾತ್ರಿ 9:51ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಅಂತ ಏಮ್ಸ್ ಆಸ್ಪತ್ರೆ ತಿಳಿಸಿದೆ. ಪತ್ನಿ ಗುರ್ಶನ್ ಕೌರ್, ಮೂವರು ಪುತ್ರಿಯರನ್ನು ಸಿಂಗ್ ಅಗಲಿದ್ದಾರೆ. ಅಮೆರಿಕದಲ್ಲಿರುವ ಪುತ್ರಿ ಆಗಮನಕ್ಕಾಗಿ ಕಾಯಲಾಗ್ತಿದೆ.

ನಾಳೆ (ಶನಿವಾರ) ಬೆಳಗ್ಗೆ 8 ಗಂಟೆಗೆ ದೆಹಲಿ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನ ರವಾನೆ ಮಾಡಿ ಬೆಳಗ್ಗೆ 9:30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 9:30ರ ಬಳಿಕ ಅಂತಿಮ ಯಾತ್ರೆ ಆರಂಭವಾಗಲಿದ್ದು, ಸುಮಾರು 11:45ಕ್ಕೆ ನಿಗಮ್‌ಬೋಧ್ ಘಾಟ್‌ನಲ್ಲಿ ಸರ್ಕಾರಿ ಮತ್ತು ಸೇನಾಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ. 

ಸೇನಾಗೌರವಗಳಿಗೆ ಸೇನಾ ಇಲಾಖೆ ಕೂಡ ಸನ್ನದ್ಧವಾಗಿದೆ. 7 ದಿನ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಇನ್ನು, ಜಾಗತಿಕ ಮಟ್ಟದಲ್ಲೂ ರಾಷ್ಟ್ರಗಳ ಮಧ್ಯೆ ಒಮ್ಮತ ಮೂಡಿಸ್ತಿದ್ದ ಚತುರನಾಗಿದ್ದ ಸಿಂಗ್ ಅಗಲಿಕೆಗೆ ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಮಲೇಷಿಯಾ, ಕೆನಡಾ ಕೂಡ ಸಂತಾಪ ಸೂಚಿಸಿವೆ. ಸಿನಿಗಣ್ಯರಾದ ರಜನಿಕಾಂತ್, ಚಿರಂಜೀವಿ, ಕಮಲ್‌ಹಾಸನ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ಡಾ. ಮನಮೋಹನ್ ಸಿಂಗ್ ಜೀವನಪಥ ಹೇಗಿದೆ?
* ಸೆ. 16ರಂದು 1932 ರಂದು ಜನನ
* ಪಶ್ಚಿಮ ಪಂಜಾಬ್‌ನ ಗಹ್‌ನಲ್ಲಿ ಜನನ – (ಈಗಿನ ಪಾಕಿಸ್ತಾನ. 2004ರಲ್ಲಿ ಪ್ರಧಾನಿಯಾದಾಗ ಈ ಗ್ರಾಮಸ್ಥರು ಸಂಭ್ರಮಿಸಿದ್ದರು. ಅಲ್ಲಿನ ಶಾಲೆಗೆ ಮನಮೋಹನ್ ಸಿಂಗ್ ಹೆಸರಿಡಲಾಗಿದೆ)
* ದೇಶ ವಿಭಜನೆ ಬಳಿಕ ಭಾರತಕ್ಕೆ ವಲಸೆ
* ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ (ಅಮೃತಸರ, ಹೋಶಿಯಾರ್‌ಪುರದಲ್ಲಿ ಕಾಲೇಜು ಶಿಕ್ಷಣ, ಕೇಂಬ್ರಿಡ್ಜ್ ವಿವಿಯಲ್ಲಿ ಪದವಿ, ಆಕ್ಸ್‌ಫರ್ಡ್‌ ವಿವಿಯಲ್ಲಿ ಡಾಕ್ಟರೇಟ್)
* 1966-69ಲ್ಲಿ ವಿಶ್ವಸಂಸ್ಥೆಯ ವಾಣಿಜ್ಯ, ಕೈಗಾರಿಕೆ ಇಲಾಖೆಯ ಸಲಹೆಗಾರರಾಗಿ ಸೇವೆ
* 1972-76- ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ
* 1982-85 – ಆರ್‌ಬಿಐ ಗೌರ್ನರ್ ಆಗಿ ಸೇವೆ
* 1985-87 – ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ
* 1996-2004- ರಾಜ್ಯಸಭೆ ವಿಪಕ್ಷ ನಾಯಕರಾಗಿ ಸೇವೆ
* 1999ರಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಸೋಲು
* 2004-2014ರವರೆಗೆ ಪ್ರಧಾನ ಮಂತ್ರಿ (ಭಾರತದ 13ನೇ ಪ್ರಧಾನಿಯಾಗಿ ನೇಮಕ)
* ನೆಹರೂ, ಇಂದಿರಾ ಬಳಿಕ ದೀರ್ಘಕಾಲದ ಪ್ರಧಾನಿ
* ಸಿಖ್ ಸಮುದಾಯದ ಮೊದಲ ಪಿಎಂ ಎಂಬ ಗರಿಮೆ
* ಯುಪಿಎ2 ಅವಧಿಯಲ್ಲಿ ಹಲವು ಹಗರಣ ಆರೋಪ (ಕಾಮನ್‌ವೆಲ್ತ್ ಗೇಮ್ಸ್, 2ಜಿ ಸ್ಪೆಕ್ಟ್ರಮ್‌, ಕಲ್ಲಿದ್ದಲು ಗಣಿ ಹಂಚಿಕೆ)
* 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು
* 1991-2019ರವರೆಗೆ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆ
* 2019-2024ರವರೆಗೂ ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯ