ಮುಂಬೈ: 39 ಮಂದಿ ಶಾಸಕರು ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಾಗ್ಪುರದ ರಾಜಭವನದಲ್ಲಿ ನಡೆದ ಈ ಸಮಾರಂಭದಲ್ಲಿ 33 ಮಂದಿ ಕ್ಯಾಬಿನೆಟ್ ಸಚಿವರಾಗಿ 6 ಮಂದಿ ರಾಜ್ಯ ಸಚಿವರಾಗಿ ಸಿಎಂ ದೇವೇಂದ್ರ ಫಡ್ನವೀಸ್ ಸಂಪುಟಕ್ಕೆ ಸೇರ್ಪಡೆಯಾದರು.
ಮಹಾಯುತಿಯಲ್ಲಿ ಅತಿ ದೊಡ್ಡ ಪಕ್ಷವಾದ ಬಿಜೆಪಿ 16 ಕ್ಯಾಬಿನೆಟ್ ಸ್ಥಾನ ಪಡೆದುಕೊಂಡರೆ, ಶಿವಸೇನೆ 9, ಎನ್‌ಸಿಪಿ 8 ಸ್ಥಾನ ಪಡೆದುಕೊಂಡಿದೆ. ಬಿಜೆಪಿಯ ಮೂವರು, ಶಿವಸೇನೆಯ ಇಬ್ಬರು ಮತ್ತು ಎನ್‌ಸಿಪಿಯ ಒಬ್ಬರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಯಾರಿಗೆ ಯಾವ ಖಾತೆ ಎನ್ನುವುದು ತಿಳಿದು ಬಂದಿಲ್ಲ. ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆಯಾಗುವ ಸಾಧ್ಯತೆಯಿದೆ.
ಗೃಹ ಖಾತೆಯನ್ನು ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆಯಿದೆ. ಡಿ.5 ರಂದು ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಒಕ್ಕೂಟ ಜಯಭೇರಿ ಭಾರಿಸಿತ್ತು. ಬಿಜೆಪಿ 132, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 57, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದುಕೊಂಡಿತ್ತು.