ಸಿಂಪಲ್ ಆಗಿ ಬಿಡುಗಡೆ ಆದರೂ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ ‘ಮ್ಯಾಕ್ಸ್’

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೀ ರಿಲೀಸ್ ಇವೆಂಟ್ ಹೊರತಾಗಿ ಭಾರಿ ಅದ್ಧೂರಿ ಪ್ರಚಾರ ಮಾಡದೆ, ಬೇರೆ ಬೇರೆ ನಗರಗಳಿಗೆ ಹೋಗಿ ಪತ್ರಿಕಾಗೋಷ್ಠಿ ಮಾಡದೆ ಸರಳವಾಗಿಯೇ ‘ಮ್ಯಾಕ್ಸ್’ ಸಿನಿಮಾ ಅನ್ನು ಬಿಡುಗಡೆ ಮಾಡಲಾಗಿತ್ತು. ಸಿಂಪಲ್ ಆಗಿ ಬಿಡುಗಡೆ ಮಾಡಿದ್ದರೂ ಸಹ ಮೊದಲ ದಿನ ಭರ್ಜರಿ ಬೆಳೆಯನ್ನೇ ತೆಗೆದುಕೊಟ್ಟಿದೆ ಈ ಸಿನಿಮಾ. ಈ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ ‘ಮ್ಯಾಕ್ಸ್’.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ 8.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೆಲ ದಿನಗಳ ಹಿಂದೆ ಬಿಡುಗಡೆ ಆದ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ಮೊದಲ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಸಿನಿಮಾವನ್ನು ಹಿಂದಿ, ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ‘ಮ್ಯಾಕ್ಸ್’ ಸಿನಿಮಾವನ್ನು ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ಮಾತ್ರವೇ ತೆರೆಗೆ ತರಲಾಗಿದೆ. ಹಾಗಿದ್ದರೂ ಸಹ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ ಸುದೀಪ್​ರ ಸಿನಿಮಾ.

ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇದೀಗ ಕ್ರಿಸ್​ಮಸ್ ರಜೆಯೂ ಇರುವ ಕಾರಣ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವುದು ಪಕ್ಕಾ ಎನ್ನಲಾಗುತ್ತಿದ್ದು, ಎರಡನೇ ದಿನದ ಕಲೆಕ್ಷನ್ ಮೊದಲ ದಿನದ ಕಲೆಕ್ಷನ್​ನ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ. ಮೊದಲ ದಿನ ಗಳಿಕೆ ಆಗಿರುವ 8.50 ಕೋಟಿ ರೂಪಾಯಿ ಕಲೆಕ್ಷನ್​ನಲ್ಲಿ ಸುಮಾರು 82% ಕಲೆಕ್ಷನ್ ಕರ್ನಾಟಕ ಒಂದರಿಂದಲೇ ಬಂದಿದ್ದು, ಉಳಿದ 18% ಕಲೆಕ್ಷನ್ ಪರಭಾಷೆಗಳಿಂದ ಬಂದಿದೆ.

ಚೆನ್ನೈನಲ್ಲಿ ‘ಮ್ಯಾಕ್ಸ್’ ಸಿನಿಮಾಕ್ಕೆ ಕಡಿಮೆ ಶೋಗಳು ದೊರೆತಿವೆ. ಕನ್ನಡ ಆವೃತ್ತಿಗೆ ಸಿಕ್ಕಿರವುದು ಆರು ಶೋ ಮಾತ್ರ. ಆದರೆ ಹೈದರಾಬಾದ್​ನಲ್ಲಿ ‘ಮ್ಯಾಕ್ಸ್’ ಸಿನಿಮಾಕ್ಕೆ ಒಳ್ಳೆಯ ಶೋಗಳು ದೊರೆತಿವೆ. ಚೆನ್ನೈಗಿಂತಲೂ ‘ಮ್ಯಾಕ್ಸ್’ ಸಿನಿಮಾ ಹೈದರಾಬಾದ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈಗ ಸಿನಿಮಾ ಬಗ್ಗೆ ಪಾಸಿಟಿವ್ ವಿಮರ್ಶೆಗಳು ಹರಿದಾಡಿದ ಬಳಿಕ ಚೆನ್ನೈನಲ್ಲಿಯೂ ಶೋಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರೂ ತಮಿಳುನಾಡಿನವರೇ ಆಗಿರುವುದು ಸಿನಿಮಾಕ್ಕೆ ಅಲ್ಲಿ ಸಹಾಯ ಆಗುವ ಸಾಧ್ಯತೆ ಇದೆ.

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾವನ್ನು ತಮಿಳುನಾಡಿನ ಜನಪ್ರಿಯ ಸಿನಿಮಾ ನಿರ್ಮಾಪಕ ಕಳಯಪುಲಿ ಎಸ್ ಥನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಅವರ ಸಹ ನಿರ್ಮಾಣವೂ ಇದೆ. ಸಿನಿಮಾ ನಿರ್ದೇಶನ ಮಾಡಿರುವುದು ವಿಜಯ್ ಕಾರ್ತಿಕೇಯ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ವರಲಕ್ಷ್ಮಿ ಶರತ್​ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ, ತೆಲುಗು ನಟ ಸುನಿಲ್, ಶರತ್ ಲೋಹಿತಾಶ್ವ, ಉಗ್ರಂ ಮಂಜು ಇನ್ನಿತರರು ನಟಿಸಿದ್ದಾರೆ.