ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮದ ಸಮಗ್ರ ಜಾರಿ, ರಾಷ್ಟ್ರಕವಿ ಪ್ರಶಸ್ತಿ ಘೋಷಣೆ, ಸರ್ಕಾರಿ ಕನ್ನಡ ಶಾಲೆಗಳ ಸುಧಾರಣೆ ಮುಂತಾದ ಆರು ಪ್ರಮುಖ ನಿರ್ಣಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯಗಳನ್ನು ಕೈಗೊಂಡಿದ್ದು, ಅನುಷ್ಠಾನಕ್ಕೆ ಸಿಎಂ ಸಿದ್ದರಾಮಯ್ಯರನ್ನು ಕಸಾಪ ಮನವಿ ಮಾಡಿದೆ.
ಮಂಡ್ಯ, ಡಿಸೆಂಬರ್ 22: ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಸಂಪನ್ನಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ, ರಾಷ್ಟ್ರಕವಿ ಪ್ರಶಸ್ತಿ ಘೋಷಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಬಹಿರಂಗ ಅಧಿವೇಶದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ತೆಗೆದುಕೊಂಡ ನಿರ್ಣಾಯಗಳು ಹೀಗಿವೆ.
- ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- 2022 ಸಮಗ್ರ ಜಾರಿಗೆಗೆ ಒತ್ತಾಯ
- ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ಖಾಲಿ ಇರುವ ಶಿಕ್ಚಕರ ಹುದ್ದೆ ಭರ್ತಿ ಮಾಡುವುದು.
- ಸರೋಜಿನಿ ಮಹಿಷಿ ವರದಿ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಜೊತೆಗೆ ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿಯಿರುವ ಕೇಸ್ಗಳನ್ನು ಸರ್ಕಾರ ಎದುರಿಸಬೇಕು.
- ಧಾರವಾಡದಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅತಿ ಶೀಘ್ರದಲ್ಲಿ ನಡೆಸಬೇಕು.
- ರಾಷ್ಟ್ರಕವಿ ಪ್ರಶಸ್ತಿಯನ್ನ ಘೋಷಿಸಿಬೇಕು.
- 87ನೇ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕಾರಣವಾದ ಸಚಿವ ಚಲುವರಾಯಸ್ವಾಮಿಗೆ ಸೇರಿ ಎಲ್ಲರಿಗೂ, ಗಣ್ಯರಿಗೆ ಅಭಿನಂದನೆಗೆ ಮಂಡನೆ.
ಈ ಎಲ್ಲಾ ವಿಷಯಗಳನ್ನು ಅನುಮೋದನೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ನಿರ್ಣಯಗಳನ್ನು ಅಂಗೀಕರಿಸುವಂತೆ ಕಸಾಪ ತಂಡ ಮನವಿ ಮಾಡಲಿದೆ.
ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು, ನುಡಿಯ ಡಿಂಡಿಮ ಮೊಳಗಿದೆ. ಮೊದಲ ದಿನ ಬರೋಬ್ಬರಿ 2 ಲಕ್ಷ ಜನ ಸೇರಿ ದಾಖಲೆ ಬರೆದಿದ್ದರೆ, ಎರಡು ಮತ್ತು ಮೂರನೇ ದಿನ ಕೂಡ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಗರೋಪಾದಿಯಲ್ಲಿ ಆಗಮಿಸಿದ್ದರು.
ನಿನ್ನೆ 5 ವಿಷಯಗಳ ಕುರಿತು ಪ್ರಧಾನ ವೇದಿಕೆಯಲ್ಲಿ ಕವಿಗೋಷ್ಠಿ ನಡೆಸಲಾಯಿತು. ಸಂಜೆ ಸಮ್ಮೇಳಾನಾಧ್ಯಕ್ಷ ಗೊ.ರು.ಚೆ ಜತೆ ಸಂವಾದ ನಡೆಯಿತು. ಇನ್ನು ರಾತ್ರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಂದ ಸಂಗೀತ ಕಾರ್ಯಕ್ರಮದಲ್ಲಿ, ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.