ಕೊಪ್ಪಳ, ಡಿಸೆಂಬರ್ 21: ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಇಂದು ಸಂಜೆ ಕೊಪ್ಪಳ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ದಸ್ತಗಿರ್ ಅಲಿ, ಲೋಕಾ ಬಲೆಗೆ ಬಿದ್ದ ಅಧಿಕಾರಿ. ಲಂಚದ ಹಣ ನುಂಗಿದ ಅಧಿಕಾರಿ ದಸ್ತಗಿರ್ ಅಲಿಗೆ ವಾಂತಿ ಮಾಡಿಸಿ ಲೋಕಾಯುಕ್ತ ಅಧಿಕಾರಿಗಳು ಕಕ್ಕಿಸಿದ್ದಾರೆ.
ಎನ್ಜಿಓಗೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಅನ್ನೋರಿಗೆ ದಸ್ತಗಿರ್ ಅಲಿ ಎರಡು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ದಸ್ತಗಿರ್ ಅಲಿಯನ್ನು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಚದ ಹಣ ನುಂಗಿ ಭಂಡತನ ಮೆರೆದೆ ಅಧಿಕಾರಿ
ಲೋಕಾಯುಕ್ತ ಪೊಲೀಸರ ಬಲೆಗೆ ಬೀಳ್ತಿದ್ದಂತೆ ದಸ್ತಗಿರ್ ಅಲಿ ಹೈಡ್ರಾಮಾವೇ ಮಾಡಿದ್ದಾರೆ. ಲಂಚ ಪಡೆದಿದ್ದ ಎರಡು ಸಾವಿರ ರೂಪಾಯಿ ನೋಟನ್ನು ನುಂಗಿ ಸಾಕ್ಷಿನಾಶ ಮಾಡಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ನೀರು ಕುಡಿಸಿ ವಾಂತಿ ಮಾಡಿಸಿ, ಹಣ ಹೊರಗೆ ತೆಗೆಸಿದ್ದಾರೆ.
ಸದ್ಯ ದಸ್ತಗಿರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ, ಸುನೀಲ್ ಮೇಗಿಲಮನಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಅಬಕಾರಿ ಇನ್ಸಪೆಕ್ಟರ್ಗೆ ಲೋಕಾ ಬಿಸಿ
ಇನ್ನು ಇತ್ತೀಚೆಗೆ ಕೊಪ್ಪಳ ನಗರದಲ್ಲಿರುವ ಅಬಕಾರಿ ಇಲಾಖೆಯಲ್ಲಿ, ಅಬಕಾರಿ ಇನ್ಸಪೆಕ್ಟರ್ ಅಂತ ಕೆಲಸ ಮಾಡುತ್ತಿರುವ ರಮೇಶ್ ಅಗಡಿ ಅರಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಕ್ ನೀಡಿದ್ದರು. ಕೊಪ್ಪಳ ನಗರದ ಬೃಂದಾವನ ನಗರದಲ್ಲಿರುವ ಬಾಡಿಗೆ ಮನೆ, ಬಿ.ಟಿ ಪಾಟೀಲ್ ನಗರದಲ್ಲಿರುವ ಕಚೇರಿ ಮತ್ತು ಸ್ವಗ್ರಾಮ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ, ಮುಂಜಾನೆಯಿಂದ ಸಂಜೆವರಗೆ ದಾಖಲಾತಿಗಳ ಪರಿಶೀಲನೆ ಮಾಡಿದ್ದರು.
ರಾಯಚೂರು ಲೋಕಾಯುಕ್ತ ಎಸ್ಪಿ ಎಂಎನ್ ಶಶಿದರ್, ನೇತೃತ್ವದಲ್ಲಿ ಡಿವೈಎಸ್ಪಿ ಶೀಲವಂತ, ಸಿಪಿಐ ಸುನೀಲ್ ಮೇಗಿಲಮನಿ ತಂಡ, ಪರಿಶೀಲನೆ ಮಾಡಿದ್ದರು. ನಸುಕಿನ ಜಾವ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದರು.