ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುದಿನದ ಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕುಮಟಾ ತಾಲೂಕಿನಲ್ಲಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದ್ರು…
ಮಂಗಳವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿ ಕುರಿತು ವಿಶೇಷ ಚರ್ಚೆಯಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿಯವರು, ಉತ್ತರ ಕನ್ನಡ ಜಿಲ್ಲೆಯೂ ಉತ್ತರ ಕರ್ನಾಟಕಕ್ಕೂ ಸೇರಿಲ್ಲ. ಕಲ್ಯಾಣ ಕರ್ನಾಟಕಕ್ಕೂ ಸೇರಿಲ್ಲ. ತ್ಯಾಗ ಮಾಡಿರುವ ಜಿಲ್ಲೆ ಅಭಿವೃದ್ದಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಹೇಳಿದ್ರು..
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಬರ್ಡ್ ಇದೆ. ಆದರೆ ಸ್ಥಳೀಯರಿಗೆ ಉದ್ಯೋಗ ಇಲ್ಲ. ಕೈಗಾದಲ್ಲಿ ಅಣುಸ್ಥಾವರ ಇದೆ. ಅದರಿಂದ ಹೇಗೆಲ್ಲ ದುಷ್ಪರಿಣಾಮಗಳು ಆಗುತ್ತಿವೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್, ಬಿಜೆಪಿ, ಜನತಾದಳ ಯಾವುದೇ ಪಕ್ಷ ಸರಕಾರವಿರಲಿ. ನಮ್ಮ ಜಿಲ್ಲೆ ನಿರ್ಲಕ್ಷಕ್ಕೆ ಒಳಗಾಗಿದೆ. ಎಂದು ಹೇಳಿದ್ರು..
ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಏನಾದರು ಅನಾಹುತಗಳು ಅದರೆ ರೋಗಿಗಳನ್ನು ಸಂತ್ರಸ್ಥರನ್ನು ಕರೆದುಕೊಂಡು ಮಂಗಳೂರು ಅಥವಾ ಮಣಿಪಾಲಕ್ಕೆ ಬರಬೇಕು. ಇಲ್ಲವೇ ಗೋವಾಗೆ ಹೋಗಬೆಕು. ಕುಮಟಾ ಮಧ್ಯವರ್ತಿ ಸ್ಥಳವಾಗಿರುವುದರಿಂದ ಸರ್ಕಾರ ಇಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿದ್ರೆ ಈ ಭಾಗದ ಜನರ ಜೀವ ಕಾಪಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ ಎಂದು ಹೇಳಿದ್ರು..
ವೈದ್ಯಕೀಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಾಮ್ ಕೇರ್ ಸೆಂಟರ್ ಅನ್ನು ಆರಂಭಿಸಬೇಕು. ನಮ್ಮಲ್ಲಿ ಸಿಹಿ ಈರುಳ್ಳಿ ಬೆಳೆಯುತ್ತಾರೆ. ಆ ಬೆಳೆಯನ್ನು ದಾಸ್ತಾನು ಮಾಡಲು ಶೈತ್ಯಾಗಾರದ ಅಗತ್ಯವಿದೆ ಎಂದು ಹೇಳಿದ್ರು..
ಅಘನಾಶಿನಿ ನದಿಗೆ 150 ಕೋಟಿ ರೂ. ವೆಚ್ಚದಲ್ಲಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ 9 ಗ್ರಾಮ ಪಂಚಾಯತಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿರುವುದರಿಂದ ಅದನ್ನು ಭರ್ತಿ ಮಾಡಿಕೊಡಬೇಕೆಂದು ಮನವಿ ಮಾಡಿದ್ರು….
ಒಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುದಿನದ ಬೇಡಿಕೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೆ ಕೂಗು ವಿಧಾನಸಭೆಯಲ್ಲಿಯೂ ಚರ್ಚೆಯಾಗಿದ್ದು, ಶಾಸಕ ದಿನಕರ ಶೆಟ್ಟಿಯವರು ಮತ್ತೊಮ್ಮೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಇನ್ನಾದರೂ ಸರ್ಕಾರ ಜಿಲ್ಲೆಯ ಜನರ ಕನಸಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಅಸ್ತು ಅನ್ನುತ್ತಾ ಅನ್ನೋದನ್ನು ಕಾದು ನೋಡಬೇಕಿದೆ..