ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಫೈನಲ್ ಪಂದ್ಯವು ಜೂನ್ 11 ರಿಂದ 15 ರವರಗೆ ನಡೆಯಲಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ WTC ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಕಣಕ್ಕಿಳಿಯಲಿದೆ. ಪ್ರಸ್ತುತ ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ಟೀಮ್ ಇಂಡಿಯಾ ಮೂರನೇ ಸ್ಥಾನವನ್ನು ಅಲಂಕರಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಲ್ಲಿ ಮತ್ತಷ್ಟು ಪೈಪೋಟಿ ಏರ್ಪಟ್ಟಿದೆ. ಏಕೆಂದರೆ ಮುಂದಿನ ಎರಡು ಪಂದ್ಯಗಳು ಉಭಯ ತಂಡಗಳಿಗೆ ನಿರ್ಣಾಯಕ. ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಹೊರಬೀಳುವುದು ಖಚಿತ
ಏಕೆಂದರೆ ಭಾರತ ತಂಡವು ಮೆಲ್ಬೋರ್ನ್ ಮತ್ತು ಸಿಡ್ನಿ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ 60.52% ಶೇಕಡಾವಾರು ಅಂಕಗಳನ್ನು ಪಡೆಯಲಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.
ಅತ್ತ ಮುಂದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಸೋತರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇದಾಗ್ಯೂ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳನ್ನಾಡಬೇಕಿದೆ. ಆದರೆ ಈ ಪಂದ್ಯಗಳಲ್ಲಿ ಜಯ ಸಾಧಿಸಿದರೂ ಟೀಮ್ ಇಂಡಿಯಾವನ್ನು ಅಂಕ ಪಟ್ಟಿಯಲ್ಲಿ ಹಿಂದಿಕ್ಕಲು ಸಾಧ್ಯವಾಗುವುದಿಲ್ಲ ಎಂಬುದು ವಿಶೇಷ.
ಏಕೆಂದರೆ ಮುಂದಿನ ಎರಡು ಪಂದ್ಯಗಳಲ್ಲಿನ ಸೋಲು ಆಸ್ಟ್ರೇಲಿಯಾ ತಂಡ ಶೇಕಡಾವಾರು ಅಂಕವನ್ನು 53ಕ್ಕೆ ಇಳಿಸಲಿದೆ. ಇದಾಗ್ಯೂ ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಸರಣಿ ಗೆದ್ದರೂ ಒಟ್ಟು 57% ಮಾತ್ರ ಪಡೆಯಲಿದೆ. ಅತ್ತ ಟೀಮ್ ಇಂಡಿಯಾ 60% ಪಡೆಯಲಿರುವ ಕಾರಣ ಫೈನಲ್ಗೆ ಪ್ರವೇಶಿಸುವುದು ಖಚಿತ.
ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಹೊರದಬ್ಬಿ ಭಾರತ ತಂಡ ಫೈನಲ್ಗೆ ಪ್ರವೇಶಿಸಬಹುದು. ಮತ್ತೊಂದೆಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವು ಪಾಕಿಸ್ತಾನ್ ವಿರುದ್ಧ ಒಂದು ಪಂದ್ಯ ಗೆದ್ದರೆ ಫೈನಲ್ಗೆ ನೇರ ಅರ್ಹತೆ ಪಡೆಯಲಿದೆ. ಹೀಗಾಗಿ ಈ ಬಾರಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಫೈಟ್ ಅನ್ನು ನಿರೀಕ್ಷಿಸಬಹುದು.