ಅಡಕೆ ಕ್ಯಾನ್ಸರ್‌ಕಾರಕ ಅಲ್ಲ: ಸಚಿವ ಮಲ್ಲಿಕಾರ್ಜುನ ಸ್ಪಷ್ಟನೆ

ಅಡಕೆಯೊಂದರಿಂದಲೇ ಕ್ಯಾನ್ಸರ್ ಬರುವುದಿಲ್ಲ. ತಂಬಾಕಿನೊಂದಿಗೆ ಮಿಶ್ರಣಗೊಂಡು ಸೇವನೆಯಾದಲ್ಲಿ ಮಾತ್ರ ಕ್ಯಾನ್ಸರ್ ಕಾರಕ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿಧಾನಸಭೆಗೆ ಸ್ಪಷ್ಟಪಡಿಸಿದರು.

ಆರಗ ಜ್ಞಾನೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ಕಳವಳ ಬೇಡ ಎಂದರು. ಇದಲ್ಲದೇ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಯುತ್ತಿದ್ದು, ಅಡಕೆ ವಿಷಯವಾಗಿ ಕೇಂದ್ರ ಸರ್ಕಾರಕ್ಕೂ ಬಿಜೆಪಿ ಸೂಕ್ತ ಒತ್ತಡ ಹಾಕಬೇಕು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ತಂಬಾಕಿನೊಂದಿಗೆ ಮಿಶ್ರಣ ಮಾಡಿ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ವರದಿ ಹೇಳಿದೆ ಎಂದು ನುಡಿದರು.

‘ಮಲೆನಾಡು ಮತ್ತು ಕರಾವಳಿಯ ಆರ್ಥಿಕತೆ ಬೆನ್ನೆಲುಬು ಅಡಕೆ ಬೆಳೆಯಾಗಿದೆ. ಆದ್ದರಿಂದ ಈ ಗೊಂದಲಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು’ ಎಂದು ಸ್ಪೀಕರ್ ಯು.ಟಿ.ಖಾದರ್ ಈ ಸಂದರ್ಭದಲ್ಲಿ ಸಚಿವರಿಗೆ ಸಲಹೆ ಮಾಡಿದರು.

ಅಡಕೆ ಕ್ಯಾನ್ಸ‌ರ್ ಕಾರಕವೇ ಎಂಬ ವಿಷಯವಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಹಾಕಿ ಅಡಕೆ ಕ್ಯಾನ್ಸ‌ರ್ ಕಾರಕ ಅಲ್ಲ ಎಂಬುದನ್ನು ತಿಳಿಸಬೇಕು.

ರಾಜ್ಯದ ಪರವಾಗಿ ಪ್ರತ್ಯೇಕ ವಕೀಲರನ್ನು ನೇಮಿಸಿ ಅಡಕೆ ಗುಣಗಳ ಬಗ್ಗೆ ವಾದ ಮಂಡನೆ ಮಾಡಬೇಕು ಎಂಬ ಸಲಹೆಯೂ ಸದನದಲ್ಲಿ ಕೇಳಿ ಬಂತು.