ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಆಗುತ್ತಲೇ ಇರುತ್ತದೆ. ಹಳಬರು ಹೊಸಬರ ಜೊತೆ ಸೇರಿ ಸಿನಿಮಾ ಮಾಡುತ್ತಾರೆ. ಸದ್ಯ ‘ಬೇಗೂರು ಕಾಲೋನಿ’ ಸಿನಿಮಾ ಕೂಡ ಹೊಸಬರು- ಹಳಬರು ಸೇರಿ ಮಾಡಿರುವ ಸಿನಿಮಾ. ಸದ್ಯ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
ಮೋಷನ್ ಪೋಸ್ಟರ್‌ನಿಂದ ಸದ್ದು ಮಾಡಿದ್ದ ‘ಬೇಗೂರು ಕಾಲೋನಿ’ ಸಿನಿಮಾ ಟೀಸರ್ ಇದೀಗ ಹೊರಬಂದಿದೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ ಟೀಸರ್ ಅನಾವರಣ ಮಾಡಿ ತಂಡಕ್ಕೆ ಶುಭ ಕೋರಿದರು. ಒಂದು ಕಾಲೋನಿ ಜನರ ನೋವು ನಲಿವಿನ ಕಥೆ ಈ ಚಿತ್ರದಲ್ಲಿದೆ. ಆಕ್ಷನ್ , ಎಮೋಷನ್, ಪ್ರೀತಿ ಎಲ್ಲದರ ಝಲಕ್ ಮಿಕ್ಸ್ ಮಾಡಿ ಟೀಸರ್ ಕಟ್ ಮಾಡಲಾಗಿದೆ.
ಶ್ರೀಮಾ ಸಿನಿಮಾಸ್ ಬ್ಯಾನರ್ ಅಡಿ ಎಂ ಶ್ರೀನಿವಾಸ್ ಬಾಬು ಎಂಬುವವರು ‘ಬೇಗೂರು ಕಾಲೋನಿ’ ಚಿತ್ರ ನಿರ್ಮಿಸಿದ್ದಾರೆ. ಫ್ಲೈಯಿಂಗ್ ಕಿಂಗ್ ಮಂಜು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ರಾಜೀವ್ ಚಿತ್ರದ ಲೀಡ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ.
ಬೆಂಗಳೂರು ದಕ್ಷಿಣ ಭಾಗದ ಬೇಗೂರಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇದೇ ಭಾಗದ ಒಂದು ಕಾಲೋನಿ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಬೊಮ್ಮನಹಳ್ಳಿ ಕ್ಷೇತ್ರದ ರೂಪೇನ ಅಗ್ರಗಾರದ ನಿವಾಸಿ ಮಂಜು ತಮ್ಮದೇ ಭಾಗದ ಒಂದು ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾರೆ. ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರು ಹುಟ್ಟುವ ಮೊದಲೇ ಹುಟ್ಟಿದ್ದು ಬೇಗೂರು ಎನ್ನುವ ಡೈಲಾಗ್‌ನೊಂದಿಗೆ ಚಿತ್ರದ ಟೀಸರ್ ಶುರುವಾಗುತ್ತದೆ. ಕಾಲೋನಿಗಾಗಿ ಹೋರಾಡುವ ನಾಯಕ, ಅಲ್ಲೊಂದು ಸಂಸಾರ, ಆ ಕಾಲೋನಿ ಜಾಗಕ್ಕಾಗಿ ದುಷ್ಟರು ಹವಣಿಸೋದು. ಅದಕ್ಕಾಗಿ ಕಾಲೋನಿ ಅಲ್ಲೋಲ ಸೃಷ್ಟಿಸುವುದು ಹೀಗೆ ಸಾಕಷ್ಟು ಅಂಶಗಳು ಟೀಸರ್‌ನಲ್ಲಿ ಬಂದು ಹೋಗುತ್ತದೆ.
ತೆಲುಗಿನ ಪೊಸಾನಿ ಕೃಷ್ಣ ಮುರಳಿ, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಬಾಲ ರಾಜ್‌ವಾಡಿ ಸೇರಿದಂತೆ ದೊಡ್ಡ ತಾರಾಗಣ ‘ಬೇಗೂರು ಕಾಲೋನಿ’ ಚಿತ್ರದಲ್ಲಿದೆ. ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ. ಮಾಸ್ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ ಇದು. ಅದ್ಧೂರಿ ಮೇಕಿಂಗ್ ಹಾಗೂ ಜಬರ್ದಸ್ತ್ ಆಕ್ಷನ್ ಸನ್ನಿವೇಶಗಳಿಂದ ‘ಬೇಗೂರು ಕಾಲೋನಿ’ ಸಿನಿಮಾ ಭರವಸೆ ಮೂಡಿಸಿದೆ. ಟೀಸರ್ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಕೂಡ ಚಿತ್ರಮಂದಿರಕ್ಕೆ ಬರುವಂತೆ ಸಿನಿಮಾ ಭರವಸೆ ಮೂಡಿಸಿದೆ. ‘ಬೇಗೂರು ಕಾಲೋನಿ’ ಸಿನಿಮಾ ಟೀಸರ್ ನೋಡಿ ನಿರ್ದೇಶಕ ತರುಣ್ ಸುಧೀರ್ ಮೆಚ್ಚುಗೆ ಸೂಚಿಸಿದ್ದಾರೆ. ಒಂದು ಚಿತ್ರದ ಟೀಸರ್ ಕಟ್ ಮಾಡುವ ರೀತಿ ಬಹಳ ಮುಖ್ಯ. ಒಂದು ಚಿತ್ರಕ್ಕೆ ಅದು ಇನ್ವಿಟೇಷನ್ ಇದ್ದಂತೆ. ಟೀಸರ್ ಜನರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತದೆ. ಆ ನಿಟ್ಟಿನಲ್ಲಿ ಈ ಟೀಸರ್ ಚೆನ್ನಾಗಿದೆ, ತಂಡದ ಪರಿಶ್ರಮ ಗೊತ್ತಾಗುತ್ತದೆ, ಶುಭವಾಗಲಿ ಎಂದಿದ್ದಾರೆ.
ಒಂದು ಕಾಲೋನಿ ಹುಡುಗರ ಕಥೆ ಚಿತ್ರದಲ್ಲಿದೆ. ಸಿನಿಮಾ ನೋಡಿದ ಬಳಿಕ ನಿಮಗೆ ಹೊಸಬರ ಸಿನಿಮಾ ಅನಿಸಲ್ಲ. ಒಂದು ಕಾಲೋನಿಯಲ್ಲಿ ಬೆಳೆಯುವ ಮಕ್ಕಳು, ಅಲ್ಲೇ ಸಾಯುತ್ತಾರೆ. ಆದರೆ ಆ ಕಾಲೋನಿ ಜಾಗ ದಿನದಿಂದ ದಿನಕ್ಕೆ ಕಮ್ಮಿ ಆಗುತ್ತದೆ, ಚಿತ್ರದಲ್ಲಿ ನಾಯಕ ತನ್ನ ಕಾಲೋನಿ ಜಾಗವನ್ನು ಉಳಿಸಿಕೊಳ್ಳಲು ಹೋರಾಡುವ ಕಥೆ ಇದೆ ಎಂದು ನಟ ರಾಜೀವ್ ಹೇಳಿದ್ದಾರೆ.