ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ

ಕಾರವಾರ: ಮುರುಡೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆಯಾಗಿವೆ. ಕರಾವಳಿ ಕಾವಲುಪಡೆ ತಂಡ ಮೃತದೇಹಗಳನ್ನು ಹೊರಕ್ಕೆ ತೆಗೆದಿವೆ.

ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ಮೃತದೇಹಗಳು ಪತ್ತೆಯಾಗಿವೆ. ಮುರುಡೇಶ್ವರದ ನವೀನ್ ಬೀಚ್ ರೆಸಾರ್ಟ್ ಬಳಿಯ ಸಮುದ್ರದಲ್ಲಿ ಎರಡು ಹಾಗೂ ಅಳವೆ ಕೋಡಿಯಲ್ಲಿ ಒಂದು ಪತ್ತೆಯಾಗಿವೆ.

ಮೃತದೇಹವನ್ನು ಬೋಟ್ ಮೂಲಕ ದಡಕ್ಕೆ ತರಲಾಯಿತು. ಮಂಗಳವಾರ ಸಮುದ್ರದಲ್ಲಿ ಏಳು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು. ಆ ಪೈಕಿ ಮೂವರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಣೆ ಮಾಡಿದ್ರೆ, ಶ್ರಾವಂತಿ ಎಂಬಾಕೆ ಸಾವನ್ನಪ್ಪಿದ್ದಳು.

ದೀಕ್ಷಾ, ಲಾವಣ್ಯ, ವಂದನಾ ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 57 ಮಂದಿ ಪ್ರವಾಸಕ್ಕೆ ಬಂದಿದ್ದರು. ಕೋಲಾರ ಮುಳಬಾಗಿಲಿನ ಕೊತ್ತೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತರಲಾಗಿತ್ತು. ಆದರೆ, ಸಮುದ್ರದಲ್ಲಿ ಅಲೆಯ ಹೊಡೆತದಿಂದ ವಿದ್ಯಾರ್ಥಿನಿಯರು ಕೊಚ್ಚಿ ಹೋಗಿದ್ದರು.