ವಿಜೃಂಭಣೆಯ ವಿಜಯ ದಿವಸ ಆಚರಣೆ ; ಅಪರ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ

ಕಾರವಾರ. :- ಭಾರತವು 1971 ರ ಯುದ್ದದಲ್ಲಿ ಪಾಕಿಸ್ಥಾನವನ್ನು ವಿರುದ್ದ ಸಾಧಿಸಿದ ಜಯವನ್ನು ಡಿ.16 ರಂದು ವಿಜಯ ದಿವಸ ಕಾರ್ಯಕ್ರಮವನ್ನಾಗಿ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಅರ್ಥ ಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.

ಅವರು ಗುರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಜಯ ದಿವಸ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿ ವರ್ಷದಂತೆ ವಿಜಯ ದಿವಸ ಆಚರಣೆಯನ್ನು ಡಿ. 16 ರಂದು ರವೀಂದ್ರನಾಥ್ ಟಾಗೋರ್ ಕಡಲತೀರದ ಯುದ್ದ ನೌಕಾ ವಸ್ತು ಸಂಗ್ರಾಲಯದ ಬಳಿಯ ಯುದ್ದ ಸ್ಮಾರಕದ ಬಳಿ ಆಚರಿಸಲು ನಿರ್ಧರಿಸಲಾಗಿದ್ದು, ಹೊರ ಜಿಲ್ಲೆಗಳಿಗಿಂತಲೂ ವಿಭಿನ್ನವಾಗಿ ಜಿಲ್ಲೆಯಲ್ಲಿ ಎನ್.ಸಿ.ಸಿ, ನೌಕದಳ, ವಾಯುದಳ, ಸೈನಿಕರೊಂದಿಗೆ ವಿಜಯ ದಿವಸ ಆಚರಿಸಲಾಗುತ್ತದೆ. ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲ ಅಧಿಕಾರಿಗಳು ತಮ್ಮಗೆ ವಹಿಸಲಾದ ಜವಾಬ್ದಾರಿಗಳ ಸಕಲಸಿದ್ದತೆ ಮಾಡಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರು.

1971 ರಲ್ಲಿ ನಡೆದ ಯುದ್ದದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ವಿಜಯದಲ್ಲಿ ಪ್ರಮುಖ ಪಾತ್ರವಹಿಸಿದವು. ಯುದ್ದ ನೌಕಾ ವಸ್ತು ಸಂಗ್ರಾಲಯದಲ್ಲಿರುವ ಪರಮವೀರ ಚಕ್ರ ಮೇಜರ್ ರಾಮ ರಘೋಬಾ ರಾಣೆ ಅವರ ಪ್ರತಿಮೆಗೆ ಪುಷ್ಪಾರ್ಚನೆ, 1971 ರಲ್ಲಿ ನಡೆದ ಯುದ್ದದಲ್ಲಿ ಭಾರತೀಯ ಸೇನೆಯಲ್ಲಿ ಭಾಗವಹಿಸಿದ ಹಿರಿಯ ಮಾಜಿ ಸೈನಿಕರಿಗೆ ಸನ್ಮಾನ, 2024ರ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಗುವುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಕ್ಯಾಪ್ಟನ್ ರಮೇಶ ರಾವ್ ಮಾಹಿತಿ ನೀಡಿದರು.

ಸಭೆಯಲ್ಲಿ ಕದಂಬ ನೌಕಾನೆಲೆಯ ಕಮಾಂಡರ್ ವಿಷ್ಣು ಬಾಬನ ಕುಂಬಾರ್, ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ಸ್ವ್ಕಾಡ್ರನ ಲೀಡರ್ ಎಸ್.ಎಫ್ ಗಾಂವಕರ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ಎಂ ನಾಯಕ್, ಡಿಡಿಪಿಯು ಕೆ.ಹೆಚ್ ರಾಜಪ್ಪ, ಎನ್.ಸಿ.ಸಿ ಅಧಿಕಾರಿಗಳು ಮತ್ತಿತರು ಇದ್ದರು.