Syed Mushtaq Ali Trophy 2024: ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಇದೀಗ ಬರೋಡಾ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ಝಿಂಬಾಬ್ವೆ ತಂಡದ ಹೆಸರಿನಲ್ಲಿತ್ತು. ಇದೀಗ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬೃಹತ್ ಮೊತ್ತ ಪೇರಿಸಿ ಬರೋಡಾ ಹೊಸ ಇತಿಹಾಸ ನಿರ್ಮಿಸಿದೆ.
ಟಿ20 ಕ್ರಿಕೆಟ್ನಲ್ಲಿ ಬರೋಡಾ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ 20 ಓವರ್ಗಳಲ್ಲಿ ಬರೋಬ್ಬರಿ 349 ರನ್ ಕಲೆಹಾಕುವ ಮೂಲಕ ಎಂಬುದು ವಿಶೇಷ. ಇಂದೋರ್ನಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿ ಬರೋಡಾ ಬ್ಯಾಟರ್ಗಳು ಝಿಂಬಾಬ್ವೆ ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಇಂದೋರ್ನಲ್ಲಿ ಈ ಪಂದ್ಯದಲ್ಲಿ ಬರೋಡಾ ಮತ್ತು ಸಿಕ್ಕಿಂ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಬರೋಡಾ ತಂಡಕ್ಕೆ ಶಾಶ್ವತ್ ರಾವತ್ ಹಾಗೂ ಅಭಿಮನ್ಯು ಸಿಂಗ್ ಸ್ಪೋಟಕ ಆರಂಭ ಒದಗಿಸಿದ್ದರು.
ಕೇವಲ 14 ಎಸೆತಗಳನ್ನು ಎದುರಿಸಿದ ಶಾಶ್ವತ್ ರಾವತ್ 4 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 43 ರನ್ ಬಾರಿಸಿದರೆ, ಅಭಿಮನ್ಯು ಕೇವಲ 17 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 53 ರನ್ ಚಚ್ಚಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನು ಪಾನಿಯಾ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಸಿಕ್ಕಿಂ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಭಾನು ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳನ್ನು ಸಿಡಿಸಿದರು. ಈ ಮೂಲಕ ಕೇವಲ 51 ಎಸೆತಗಳಲ್ಲಿ ಅಜೇಯ 134 ರನ್ ಸಿಡಿಸಿದರು. ಭಾನು ಪಾನಿಯಾ ಅವರ ಈ ಸ್ಪೋಟಕ ಇನಿಂಗ್ಸ್ನಲ್ಲಿ 15 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳು ಮೂಡಿಬಂದಿದ್ದವು.
ಹಾಗೆಯೇ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 6 ಸಿಕ್ಸ್ಗಳೊಂದಿಗೆ 55 ರನ್ ಬಾರಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ವಿಷ್ಣು ಸೋಲಂಕಿ 16 ಎಸೆತಗಳಲ್ಲಿ 6 ಸಿಕ್ಸರ್ಗಳೊಂದಿಗೆ 50 ರನ್ ಸಿಡಿಸಿದರು. ಈ ಮೂಲಕ ಬರೋಡಾ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 349 ರನ್ ಪೇರಿಸಿದೆ.
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ:
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಇದೀಗ ಬರೋಡಾ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಝಿಂಬಾಬ್ವೆ ತಂಡದ ಹೆಸರಿನಲ್ಲಿತ್ತು. ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ಝಿಂಬಾಬ್ವೆ ತಂಡವು 344 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಬರೋಡಾ ಬ್ಯಾಟರ್ಗಳು 349 ರನ್ ಬಾರಿಸಿ ಹಳೆಯ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೆಯೇ ಭಾರತೀಯ ಅಂಗಳದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು 300+ ಸ್ಕೋರ್ಗಳಿಸಿದೆ. ಈ ಮೂಲಕ ಬರೋಡಾ ತಂಡವು ಭಾರತೀಯ ಕ್ರಿಕೆಟ್ ಚರಿತ್ರೆಯಲ್ಲೇ ಹೊಸ ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಬರೋಡಾ ಪ್ಲೇಯಿಂಗ್ 11: ಶಾಶ್ವತ್ ರಾವತ್ , ಅಭಿಮನ್ಯು ಸಿಂಗ್ ರಜಪೂತ್ , ಭಾನು ಪಾನಿಯಾ , ಕೃನಾಲ್ ಪಾಂಡ್ಯ (ನಾಯಕ) , ಶಿವಾಲಿಕ್ ಶರ್ಮಾ , ವಿಷ್ಣು ಸೋಲಂಕಿ (ವಿಕೆಟ್ ಕೀಪರ್) , ಅತಿತ್ ಶೇತ್ , ಮಹೇಶ್ ಪಿಥಿಯಾ , ಚಿಂತಲ್ ಗಾಂಧಿ , ರಾಜ್ ಲಿಂಬಾನಿ , ನಿನಾದ್ ಅಶ್ವಿನ್ ಕುಮಾರ್ ರಥ್ವಾ.
ಸಿಕ್ಕಿಂ ಪ್ಲೇಯಿಂಗ್ 11: ಪ್ರಾಣೇಶ್ ಚೆಟ್ರಿ , ನಿಲೇಶ್ ಲಮಿಚಾನೆ , ಆಶಿಶ್ ಥಾಪಾ ( ವಿಕೆಟ್ ಕೀಪರ್) , ತರುಣ್ ಶರ್ಮಾ , ಪಲ್ಜೋರ್ ತಮಾಂಗ್ , ಅಂಕುರ್ ಮಲಿಕ್ , ರೋಷನ್ ಕುಮಾರ್ , ಪಾರ್ಥ್ ಪಲಾವತ್ , ರಾಬಿನ್ ಲಿಂಬೂ , ಲೀ ಯೋಂಗ್ ಲೆಪ್ಚಾ (ನಾಯಕ) , ಎಂ ಸಪ್ಟುಲ್ಲಾ.