ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 22 ರಿಂದ ಆರಂಭವಾಗಲಿರುವ ಈ ಸರಣಿಗಾಗಿ ತೆರಳಲು ಟೀಮ್ ಇಂಡಿಯಾ ಸಜ್ಜಾಗಿದೆ. ಇದಕ್ಕೂ ಮುನ್ನ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಕೋಚ್ 10 ವಿಷಯಗಳನ್ನು ಪ್ರಸ್ತಾಪಿಸಿ, ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಈ ಸುದ್ದಿಗೋಷ್ಠಿಯ ಸಂಕ್ಷಿಪ್ತ ವಿವರಗಳು ಈ ಕೆಳಗಿನಂತಿದೆ…
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪರ್ತ್ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ಗೆ ಅಲಭ್ಯರಾಗುವ ಸಾಧ್ಯತೆಯಿದೆ. ಈ ಬಗ್ಗೆ ಮಾತನಾಡಿದ ಗಂಭೀರ್, ರೋಹಿತ್ ಶರ್ಮಾ ಇನ್ನೂ ಸಹ ಈ ವಿಚಾರವನ್ನು ದೃಢಪಡಿಸಿಲ್ಲ. ಹೀಗಾಗಿ ಖಚಿತ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
- ಇನ್ನು ರೋಹಿತ್ ಶರ್ಮಾ ಹೊರಗುಳಿದರೆ, ಟೀಮ್ ಇಂಡಿಯಾ ಪರ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ಇದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಬದಲಿ ಆರಂಭಿಕರಾಗಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
- ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಾನು ಈಗಲೇ ಪ್ಲೇಯಿಂಗ್ ಇಲೆವೆನ್ ಬಹಿರಂಗಪಡಿಸುವುದಿಲ್ಲ. ಅದು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
- ಇದೇ ವೇಳೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಪ್ರಸ್ತುತ ಫಾರ್ಮ್ ಆತಂಕಕಾರಿ ವಿಷಯವಲ್ಲ ಎಂದಿರುವ ಗಂಭೀರ್, ಇಬ್ಬರೂ ಆಟಗಾರರು ಸಾಕಷ್ಟು ಅನುಭವ ಹೊಂದಿದ್ದಾರೆ. ಅದರಲ್ಲೂ ಅವರಿಬ್ಬರೂ ಈಗಲೂ ಕೂಡ ರನ್ಗಳಿಸುವ ತುಡಿತ ಹೊಂದಿದ್ದಾರೆ ಎಂದು ತಿಳಿಸಿದರು.
- ರೋಹಿತ್ ಶರ್ಮಾ ಪರ್ತ್ ಟೆಸ್ಟ್ನಿಂದ ಹೊರಗುಳಿದರೆ ಟೀಮ್ ಇಂಡಿಯಾ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಉಪನಾಯಕರಾಗಿರುವ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ.
- ಇನ್ನು ತಂಡದಲ್ಲಿ ಅನುಭವಿ ಮತ್ತು ಯುವ ಆಟಗಾರರ ಉತ್ತಮ ಸಂಯೋಜನೆ ಇದೆ. ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರುವ ಯುವ ಆಟಗಾರರಿಗೆ ಹಿರಿಯರ ಅನುಭವವನ್ನು ಸಹಾಯಕವಾಗಲಿದೆ ಎಂದು ಗಂಭೀರ್ ತಿಳಿಸಿದ್ದಾರೆ.
- ಆಸ್ಟ್ರೇಲಿಯಾದಲ್ಲಿನ ಪಿಚ್ಗಾಗಿ ಸಿದ್ಧತೆ ಹೇಗಿದೆ ಎಂಬ ಪ್ರಶ್ನೆಗೆ, ಅಲ್ಲಿ ನೀಡಲಾಗುವ ಪಿಚ್‌ನ ಮೇಲೆ ನಮಗೆ ನಿಯಂತ್ರಣವಿಲ್ಲ. ಆದರೆ, ನಾವು ಯಾವುದೇ ಪರಿಸ್ಥಿತಿಯಲ್ಲಿ ಆಡಲು ಸಿದ್ಧರಿದ್ದೇವೆ ಎಂದು ಕೋಚ್ ಗಂಭೀರ್ ಹೇಳಿದ್ದಾರೆ.
- ನಮ್ಮ ಯೋಜನೆಯಲ್ಲಿ ವೈಯಕ್ತಿಕ ಮೈಲಿಗಲ್ಲುಗಳಿಗಿಂತ ತಂಡದ ಹಿತಾಸಕ್ತಿಯನ್ನು ಮುಂದಿಡುವುದು ನಮ್ಮ ಮೂಲ ಮಂತ್ರ. ಹೀಗಾಗಿ ಪ್ರತಿಯೊಬ್ಬರು ತಂಡದ ಗೆಲುವಿಗಾಗಿ ಈ ಮೂಲ ಮಂತ್ರದೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
- ಇನ್ನು ಭಾರತ ತಂಡದಲ್ಲಿ 5 ವೇಗಿಗಳ ಆಯ್ಕೆಗಳಿವೆ. ಅದರಲ್ಲಿ ಹರ್ಷಿತ್ ರಾಣಾಗೆ ರಾಷ್ಟ್ರೀಯ ಅನುಭವ ಇಲ್ಲದಿದ್ದರೂ, ಅವರು ಪ್ರಥಮ ದರ್ಜೆ ಕ್ರಿಕೆಟ್‌ನ ಅನುಭವ ಚೆನ್ನಾಗಿದೆ. ಹೀಗಾಗಿ ಅವರನ್ನು ಸಹ ನಾವು ಬಳಸಿಕೊಳ್ಳಬಹುದು ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
- ನ್ಯೂಝಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಕೋಚ್ ಮೇಲೆ ಒತ್ತಡವಿದೆಯೇ? ಎಂಬ ಪ್ರಶ್ನೆಗೆ, ನನ್ನ ಮೇಲೆ ಅಂತಹ ಯಾವುದೇ ಒತ್ತಡವಿಲ್ಲ ಎಂದು ಗೌತಮ್ ಗಂಭೀರ್ ಸ್ಪಷ್ಟ ಉತ್ತರ ನೀಡಿದ್ದಾರೆ.