ಬೆಂಗಳೂರು: ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್‌

ಬೆಂಗಳೂರು: ನಗರದ ಬಸವನಗುಡಿಯ ಬಿಐಟಿ ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನು ಬೆಂಗಳೂರಿನ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.

ಇದೇ ಅಕ್ಟೋಬರ್‌ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್‌ ಮೂಲಕ ಆರೋಪಿಯು ಬಾಂಬ್‌ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್‌ ಸುಧಾರಿತ ಐಇಡಿ ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.

ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನೂ ವಿಚಾರಣೆ ವೇಳೆ ಆರೋಪಿಯು ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ.

ಈ ಬೆನ್ನಲ್ಲೇ ನಗರದ ಇತರ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣಗಳ ಸಂಬಂಧವೂ ತನಿಖೆ ನಡೆಸುತ್ತಿರುವ ಪೊಲೀಸರು, ಟ್ರಾನ್ಸಿಟ್ ವಾರೆಂಟ್ ಅಡಿಯಲ್ಲಿ ಆರೋಪಿಯನ್ನ ಕಸ್ಟಡಿಗೆ ನೀಡುವಂತೆ ಮನವಿ ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಮಾಡಿದ್ದರು. ಇದೇ ವೇಳೆ ಆರೋಪಿಗಳಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ.