ರಾಣೆಬೆನ್ನೂರು ಬಳಿ ಅಪಘಾತ: ​ಲಾರಿ ಚಾಲಕನ ಎದೆಗೆ ಹೊಕ್ಕ ಕಬ್ಬಿಣದ ಪೈಪ್

ಹಾವೇರಿ: ಭೀಕರ ಅಪಘಾತವೊಂದರಲ್ಲಿ ಲಾರಿ ಚಾಲಕನ ಎದೆಗೆ ಕಬ್ಬಿಣದ ಪೈಪ್​​ ಹೊಕ್ಕ ಘಟನೆ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಗೂಡ್ಸ್​ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರೋಡ್​ಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್​ ಚಾಲಕನ ಎದೆಗೆ ಹೊಕ್ಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಗ್ನಿಶಾಮಕದಳದ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸಪಟ್ಟರು. ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣದ ಪೈಪ್​ನ್ನು ತುಂಡರಿಸಿ, ಎದೆಯಲ್ಲಿ ಸಿಕ್ಕಿರುವ ಕಬ್ಬಿಣದ ಪೈಪ್​ನೊಂದಿಗೆ ಲಾರಿ ಚಾಲಕನನ್ನು ಕಳುಹಿಸಲಾಯಿತು.

ಎದೆಯಲ್ಲಿ ಸಿಕ್ಕಿ ಹಾಕಿಕೊಂಡ ಕಬ್ಬಿಣದ ಪೈಪ್ ಕಂಡು ಎಲ್ಲರೂ ದಂಗಾಗಿದ್ದರು. 27 ವರ್ಷದ ಚಾಲಕ ಶಿವಾನಂದ ಬಡಗಿ ಎದೆಗೆ ಕಬ್ಬಿಣದ ಪೈಪ್ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ರವಾನಿಸಲು ಸಹಕರಿಸಿದ್ದಾನೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.