ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಓಮಿನಿ- ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟ ಓಮಿನಿ ಚಾಲಕ

ಯಲ್ಲಾಪುರ ಸೆ.30 : ತಾಲೂಕಿನ ಒಂಟಮನೆ ಕೆರೆ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರದಂದು ಸಂಜೆ 4ರ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಅತಿವೇಗದಿಂದ ಬಂದ ಓಮಿನಿ ಚಾಲಕನ ನಿಯಂತ್ರಣ ತಪ್ಪಿ ಬಲಬದಿಗೆ ಬಂದು, ರಸ್ತೆಯ ಪಕ್ಕದಲ್ಲಿದ್ದ ಕಬ್ಬಿಣದ ಸಿಗ್ನಲ್ ಪೈಪಿಗೆ ಡಿಕ್ಕಿ ಹೊಡೆದಿದೆ. ನಂತರ ಕಚ್ಚಾ ರಸ್ತೆ ದಾಟಿ ಅರಣ್ಯದಲ್ಲಿಯ ಒಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ವಾಹನದಿಂದ ಹೊರಬಿದ್ದ ಚಾಲಕನ ಕುತ್ತಿಗೆಯ ಭಾಗದಲ್ಲಿ ಗಾಯವಾಗಿತ್ತು.

ತಕ್ಷಣ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರಗೆ ಕರೆದಕೊಂಡು ಹೋಗುವಾಗ ಮಾರ್ಗಮಧ್ಯ ಮೃತಪಟ್ಟಿದ್ದಾಗಿ ದೂರು ದಾಖಲಾಗಿದೆ. ಮೃತ ಚಾಲಕನನ್ನು ಮಹಾರಾಷ್ಟ್ರದ ಸಾಂಗ್ಲಿಯ 38ವರ್ಷದ ಯುವರಾಜ ಪುರುಷೋತ್ತಮ ಗೌಳಿ ಎಂದು ಗುರುತಿಸಲಾಗಿದೆ. ಮೃತನ ಸಹೋದರನ ಮಗ ನಾಗರಾಜ ಸಂಗಪ್ಪ ರೆಡ್ಡಿ ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.