ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಗಣೇಶ ಮೂರ್ತಿ “ಹುಬ್ಬಳ್ಳಿ ಕಾ ಮಹಾರಾಜ​”

ಹುಬ್ಬಳ್ಳಿ ಸೆ. 13 : ಹುಬ್ಬಳ್ಳಿಯ ಗಣೇಶೋತ್ಸವ ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಹುಬ್ಬಳ್ಳಿಯ ಎರಡು ಕಡೆ ರಾಜ್ಯದಲ್ಲೇ ಅತ್ಯಂತ ಎತ್ತರವಾದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ದಾಜೀಬಾನಪೇಟ,‌‌ ಮರಾಠಾಗಲ್ಲಿಯಲ್ಲಿ 21 ಅಡಿಗೂ ಎತ್ತರವಾದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿದೆ ಫೋಟೋಸ್​

ಹುಬ್ಬಳ್ಳಿಯ ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಜಕಾಯದ ಗಣಪತಿಯು 25 ಅಡಿ ಎತ್ತರವಿದೆ. ಸುಮಾರು 5 ಟನ್​​​ಗೂ ಅಧಿಕ ತೂಕ ಹೊಂದಿದ್ದು, ಸಂಪೂರ್ಣ ಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿಯಾಗಿದೆ. ಈ ಮೂರ್ತಿ ಕರ್ನಾಟದಲ್ಲಿಯೇ ಅತೀ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆ ಹೊಂದಿದೆ.

ಪ್ರತಿ ವರ್ಷವೂ 25 ಅಡಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಈ ಮೂರ್ತಿಗೆ 25 ಕೆಜಿಗೂ ಅಧಿಕ ಬೆಳ್ಳಿಯ ಆಭರಣ ಹಾಕಲಾಗುತ್ತದೆ. ಮೂರ್ತಿಯ ಹಸ್ತ, ಪಾದುಕೆ, ಕೊರಳಲ್ಲಿರುವ ಬೃಹತ್ ಮಾಲೆ, ಮೋದಕ, ಕಿವಿಯೋಲೆಗಳನ್ನು ಸಂಪೂರ್ಣವಾಗಿ ಬೆಳ್ಳಿಯಿಂದ ತಯಾರಿಸಲಾಗುತ್ತದೆ. ಉಂಗುರ, ದಂತ, ತ್ರಿಶೂಲಕ್ಕೆ 70 ಗ್ರಾಂಗೂ ಅಧಿಕ ಬಂಗಾರ ಬಳಕೆ ಮಾಡಲಾಗಿದೆ. ಮೂರ್ತಿಯ ದೋತ್ರ (ಪಂಚೆ)ಕ್ಕೆ 25 ಮೀಟರ್ ಗಾತ್ರದ ಬಟ್ಟೆ ಬಳಕೆ ಮಾಡಿರುವುದು ಮತ್ತೊಂದು ವಿಶೇಷವಾಗಿದೆ.

ಇಲ್ಲಿ ಕಳೆದ 42 ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಮೊದಲು ಇಲ್ಲಿ ಚಿಕ್ಕದಾದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾ ಗುತ್ತಿತ್ತು. ನಂತರದ ವರ್ಷಗಳಲ್ಲಿ ಧರ್ಮಸ್ಥಳ ಮಂಜುನಾಥ, ಶಬರಿಮಲೆಯ ಅಯ್ಯಪ್ಪಸ್ವಾಮಿ ಮಂದಿರ, ಅಷ್ಟವಿನಾಯಕ ಮಂದಿರಗಳು, 65 ಅಡಿ ಎತ್ತರದ ಅಮೆರಿಕ ಟಾವರ್, ಅಜಂತಾ ಎಲ್ಲೋರಾ ಗುಹೆ, ಬರ್ನಿಂಗ್ ಟ್ರೇನ್ ಸೇರಿದಂತೆ ಹಲವು ರೂಪಕಗಳನ್ನು ಪ್ರದರ್ಶನದ ವ್ಯವಸ್ಥೆ ಮಾಡಿಲಾಗಿತ್ತು. ಈಗ ಕಳೆದ 20 ವರ್ಷಗಳಿಂದ 25 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಗಣೇಶ ಚತುರ್ಥಿ ಹಬ್ಬದ ನಾಲೈದು ತಿಂಗಳು ಮೊದಲೇ ಕೋಲ್ಕತ್ತಾದಿಂದ ಆಗಮಿಸುವ ಅಪ್ಪು ಪಾಲ್ ನೇತೃತ್ವದ 25 ಮೂರ್ತಿ ತಯಾರಕರ ತಂಡವು ಇದಕ್ಕೆ ಬೇಕಾಗುವ ಮಣ್ಣನ್ನು ಕೋಲ್ಕತ್ತಾ (ಗಂಗಾನದಿಯ)ದಿಂದ ಹುಬ್ಬಳ್ಳಿಗೆ ತಂದು ಮೂರ್ತಿ ತಯಾರಿಸುವುದು ವಿಶೇಷ.

ಮತ್ತೊಂದಡೆ ದಾಜೀಬಾನಪೇಟದಲ್ಲಿ 49 ವರ್ಷಗಳಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇಲ್ಲಿಯೂ ಕೂಡ ಕಳೆದ 18 ವರ್ಷಗಳಿಂದ 20 ಅಡಿಗೂ ಎತ್ತರವಾದ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ವರ್ಷ 24 ಅಡಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಂಪೂರ್ಣ ಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿಯಾಗಿದೆ. ಗಣಪನಿಗೆ 25 ಕೆಜಿ ಬೆಳ್ಳಿಯಿಂದ ಅಲಂಕರಿಸಲಾಗಿದೆ.