ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ನೂತನವಾಗಿ ನಿರ್ಮಿಸಿರುವ ವಾರ್ಡ್ ನಂಬರ್ 13 ಮತ್ತು 14 ನೇ ಬ್ಲಾಕ್ ನ ಅಂಗವಾಡಿ ಕಟ್ಟಡಗಳನ್ನು ಶಾಸಕ ಆರ್ ವಿ ದೇಶಪಾಂಡೆ ಗುರುವಾರ ಉದ್ಘಾಟಿಸಿದರು.
ಮಕ್ಕಳು ಶಾಲೆಯನ್ನು ಪ್ರವೇಶಿಸುವ ಮೊದಲ ಹಂತವೇ ಅಂಗನವಾಡಿ. ಮಕ್ಕಳ ಬೌದ್ಧಿಕ ವಿಕಾಸಕ್ಕೆ, ಶೈಕ್ಷಣಿಕ ವಿಕಾಸಕ್ಕೆ ಅಂಗನವಾಡಿಗಳು ಸಹಾಯಕವಾಗಿ ಭವಿಷ್ಯದ ಶಿಕ್ಷಣ ಬುನಾದಿಯಾಗುತ್ತದೆ. ನಗರದಲ್ಲಿ ಇನ್ನೂ ಅಂಗನವಾಡಿ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಇದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ತಿವಾರಿ ಮಾತನಾಡಿ, ಕೋಸ್ಟ್ ಪೇಪರ್ ಮಿಲ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜೈನ್ ನಿರ್ದೇಶನದಂತೆ 13 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿ
ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವಿದೆ. ಕಾರ್ಖಾನೆಯು ಇಂತಹ ಸಮಾಜಮುಖಿ ಕೆಲಸಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಲು ತಯಾರಿದೆ ಎಂದರು.
ಈ ಸಂದರ್ಭದಲ್ಲಿ ಹಳಿಯಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀ ದೇವಿ, ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕ, ಪೌರಾಯುಕ್ತ ರಾಜಾರಾಂ ಪವಾರ, ರೋಯಿಣಾ ಕತ್ತಿಬ್ ಹಾಗೂ ನಗರಸಭೆ ಸದಸ್ಯರು ಸೇರಿದಂತೆ ಅನೇಕರಿದ್ದರು.