ಹುಬ್ಬಳ್ಳಿ, ಸೆಪ್ಟೆಂಬರ್ 04: ಗಣೇಶ ಹಬ್ಬ ವಾರದ ರಜೆ ಹಿನ್ನೆಲೆಯಲ್ಲಿ ಜನರು ತಮ್ಮ-ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದಾರೆ. ಇದರಿಂದ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ದಿನ ನಿತ್ಯಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುವ ಸಾಧ್ಯತೆ ಇದೆ. ಇದರಿಂದ ಬಸ್ಗಳು ಫುಲ್ ರಶ್ ಆಗಲಿವೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಮತ್ತು ಶುಲ್ಕ ಹೊರೆಯನ್ನು ತಡೆಯುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರಯಾಣಿಕರಿಗೆ ವಿಶೇಷ ಅನುಕೂಲ ಕಲ್ಪಿಸಿದೆ.
ಗಣೇಶ ಚತುರ್ಥಿ ಪ್ರಯುಕ್ತ ದೂರದ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಎನ್ಡಬ್ಲೂಕೆಆರ್ಟಿಸಿ ವಿಶೇಷ ಬಸ್ ವ್ಯಸ್ಥೆ ಮಾಡಿದೆ. ಸೆಪ್ಟೆಂಬರ್ 5 ರಿಂದ 10ರವರೆಗೆ ಈ ವಿಶೇಷ ಬಸ್ಗಳು ಸಂಚರಿಸಲಿವೆ.
ಯಾವ ಯಾವ ಜಿಲ್ಲೆಗಳಿಂದ ವಿಶೇಷ ಬಸ್
ಬೆಂಗಳೂರು, ಪುಣೆ, ಹೈದರಾಬಾದ್ನಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಿಗೆ ವಿಶೇಷ ಬಸ್ ಬಿಡಲಾಗಿದೆ.
ಸೀಟ್ ಬುಕ್ಕಿಂಗ್ನಲ್ಲಿ ಬಂಪರ್ ಆಫರ್
ಹಬ್ಬದ ಸಂಭ್ರಮದಲ್ಲಿ ಬಸ್ಗಳು ಫುಲ್ ರಶ್ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಸೀಟ್ ಬುಕ್ ಮಾಡಿಕೊಂಡು ತೆರಳುತ್ತಾರೆ. ಸೀಟ್ ಬಕ್ ಮಾಡಲು ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂಬ ಚಿಂತೆ ಪ್ರಯಾಣಿಕರಿಗೆ ಇರುತ್ತದೆ. ಈ ಚಿಂತೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಎನ್ಡಬ್ಲೂಕೆಆರ್ಟಿಸಿ ಸಿಹಿ ಸುದ್ದಿ ನೀಡಿದೆ.
ಗಣೇಶ ಹಬ್ಬಕ್ಕೆ ಎನ್ಡಬ್ಲೂಕೆಆರ್ಟಿಸಿ ಪ್ರಯಾಣಿಕರಿಗೆ ಗಿಫ್ಟ್ ನೀಡಿದೆ. ಈ ಹಬ್ಬದ ಸಂದರ್ಭದಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚಿನ ಆಸನಗಳನ್ನು ಒಂದೇ ಸಲಕ್ಕೆ ಕಾಯ್ದಿರಿಸಿರಿದರೇ ಶೇ 5 ರಷ್ಟು ರಿಯಾತಿ ನೀಡಲಾಗಿದೆ.