ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದು ಕೊಟ್ಟ ನಿತೇಶ್ ಕುಮಾರ್

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು ಎರಡನೇ ಚಿನ್ನದ ಪದಕ ಲಭಿಸಿದೆ. ಕ್ರೀಡಾಕೂಟದ ಆರನೇ ದಿನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್​ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ನಿತೇಶ್ 21-14, 18-21, 23-21 ರಿಂದ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಟ್ಟರು. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಂತ್ತಾಗಿದೆ. ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್‌ನಲ್ಲಿ ನಿತೇಶ್ ಕುಮಾರ್ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಕೊನೆಗೂ ನಿತೇಶ್ ಕುಮಾರ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.