ಚಾಮರಾಜನಗರ, ಸೆ.01: ಚಾಮರಾಜನಗರ ತಾಲೂಕಿನ ಬೈಲೂರು ವಲಯದ ಮಾವತ್ತೂರಿನಲ್ಲಿ ಗಸ್ತಿನಲ್ಲಿರುವಾಗ ಇಂದು ಮತ್ತೊಂದು ಆನೆಯ ಕಳೇಬರ ಪತ್ತೆಯಾಗಿದೆ. ಸುಮಾರು 61 ವರ್ಷದ ಹೆಣ್ಣು ಆನೆಯ ಕಳೇಬರ ಇದಾಗಿದೆ. ನಿನ್ನೆ ತಾನೆ ಯಳಂದೂರು ಹಾಗೂ ಬೈಲೂರು ವ್ಯಾಪ್ತಿಯಲ್ಲಿ ಎರೆಡು ಆನೆಗಳ ಕಳೇಬರ ಪತ್ತೆಯಾಗಿತ್ತು. ಇಂದು ಮತ್ತೊಂದು ಹೆಣ್ಣಾನೆಯ ಕಳೇಬರಹ ಪತ್ತೆ ಹಿನ್ನಲೆ ಅರಣ್ಯಾಧಿಕಾರಿಗಳಲ್ಲಿ ಅನುಮಾನ ಮೂಡಿದೆ.
ಕಳೆದ ಬೇಸಿಗೆ ವೇಳೆ ಕಾಡಿನಲ್ಲಿ ಕೆರೆ, ಕಟ್ಟೆಗಳೆಲ್ಲಿ ನೀರು ಬತ್ತಿ ಹೋಗಿತ್ತು. ತೀವ್ರ ಬರ ಹಿನ್ನಲೆ ಕುಡಿಯಲು ನೀರಿಲ್ಲದೆ ಆನೆಗಳು ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆನೆಯು ಸ್ವಾಭಾವಿಕವಾಗಿ 7 ರಿಂದ 8 ದಿನಗಳ ಹಿಂದೆ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.
ಇನ್ನು ಆನೆ ಕಳೇಬರ ಬಹಳ ತಡವಾಗಿ ಪತ್ತೆಯಾಗಿರುವ ಬಗ್ಗೆ ಪರಿಸರ ಹೋರಾಟಗಾರರು ಕಿಡಿಕಾರಿದ್ದಾರೆ. ಇಂದು ಮತ್ತೊಂದು ಆನೆ ಅಸುನೀಗಿರುವ ಮಾಹಿತಿ ಪರಿಸರ ಪ್ರೇಮಿಗಳಲ್ಲಿ ಆತಂಕ ತರಿಸಿದೆ. ಒಂದೇ ವಾರದಲ್ಲಿ ಮೂರು ಆನೆಗಳ ಮೃತಪಟ್ಟಿದ್ದರ ಬಗ್ಗೆ ಅರಣ್ಯ ಇಲಾಖೆಗೂ ಅನುಮಾನ ಮೂಡಿದ್ದು, ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಕಾದುನೋಡಬೇಕಿದೆ. ಇನ್ನು ಬೈಲೂರು ವಲಯದ ಆಳದ ಕೆರೆ ಬಳಿ 45 ರಿಂದ 50 ವರ್ಷದ ಗಂಡಾನೆ ಕಳೇಬರ ಹಾಗೂ ಯಳಂದೂರು ವಲಯದ ಬೇತಾಳಕಟ್ಟೆ ಎಂಬಲ್ಲಿ ಗಂಡಾನೆ ಕಳೇಬರ ಪತ್ತೆಯಾಗಿದ್ದು, 40 ವರ್ಷದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.