ಬೆಂಗಳೂರು, ಆಗಸ್ಟ್ 25: ಆನ್ಲೈನ್ ಬೆಟ್ಟಿಂಗ್ ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡು ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿ ಸುರೇಶ್ ಬಂಧಿತ ಆರೋಪಿ. ಸುರೇಶ್ ಆನ್ಲೈನ್ನಲ್ಲಿ ಬೆಟ್ಟಿಂಗ್ ಗೇಮ್ ಆಡುತಿದ್ದನು. ಈ ವೇಳೆ ಸುರೇಶ್ ಸಾಕಷ್ಟು ಹಣ ಕಳೆದುಕೊಂಡಿದ್ದನು. ಅಲ್ಲದೇ, ಬೆಟ್ಟಿಂಗ್ ಗೇಮ್ಗಾಗಿ ಐದು ಲಕ್ಷ ಸಾಲ ಮಾಡಿಕೊಂಡಿದ್ದನು. ಆರೋಪಿ ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದನು. ಮಾಡಿದ ಸಾಲ ತೀರಿಸಲು ಆಟೋ ಸಹ ಅಡವಿಟ್ಟಿದ್ದನು. ಆದರೂ, ಸಾಲ ತೀರಿರಲಿಲ್ಲ.
ಹೀಗಾಗಿ, ಸಾಲ ತೀರಿಸಲು ದಾರಿ ಕಾಣದೆ ಸರಗಳ್ಳತನಕ್ಕಿಳಿದಿದ್ದನು. ಸುರೇಶ್ ಗಿರಿನಗರದ ಬೈರಪ್ಪ ಲೇಔಟ್ನಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ತನಿಖೆ ನಡೆಸಿ, ಆರೋಪಿ ಸುರೇಶ್ನನ್ನು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.