MS Dhoni: ಮಹೇಂದ್ರ ಸಿಂಗ್ ಧೋನಿ 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಧೋನಿ ನಿವೃತ್ತರಾಗಿ 5 ವರ್ಷವಾಗುತ್ತಾ ಬರುತ್ತಿದೆ. ಇದೇ ವೇಳೆ ಐಪಿಎಲ್ನ ಹಳೆಯ ನಿಯಮವನ್ನು ಜಾರಿಗೆ ತರುವಂತೆ ಚೆನ್ನೈ ಸೂಪರ್ ಕಿಂಗ್ಸ್ ಆಗ್ರಹಿಸಿದೆ. ಈ ಮೂಲಕ ಕಡಿಮೆ ಮೊತ್ತದಲ್ಲಿ ಹೆಚ್ಚಿನ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಿಎಸ್ಕೆ ಪ್ಲ್ಯಾನ್ ರೂಪಿಸುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಕೆಲ ಫ್ರಾಂಚೈಸಿಗಳು ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಹೀಗೆ ಪ್ಲ್ಯಾನ್ ರೂಪಿಸುವುದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಸಿಎಸ್ಕೆ ಫ್ರಾಂಚೈಸಿಯು ತನ್ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿದೆ.
ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಲಿಸ್ಟ್ನಲ್ಲಿ ಉಳಿಸಿಕೊಳ್ಳಲು ಸಿಎಸ್ಕೆ ಫ್ರಾಂಚೈಸಿ ಯೋಜನೆ ರೂಪಿಸಿದ್ದು, ಇದಕ್ಕಾಗಿ 2008ರ ಹರಾಜಿನ ನಿಯಮವನ್ನು ಮುಂದಿಟ್ಟಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಮಾಲೀಕರ ಮತ್ತು ಬಿಸಿಸಿಐ ಸಭೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇಂತಹದೊಂದು ಬೇಡಿಕೆಯನ್ನು ಪ್ರಸ್ತಾಪಿಸಿದೆ.
ಐಪಿಎಲ್ 2008ರ ನಿಯಮದ ಪ್ರಕಾರ ಯಾವುದಾದರೂ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಪರಿಗಣಿಸಬಹುದು. ಆದರೆ ಈ ನಿಯಮವು ಬಳಕೆಗೆ ಬರದ ಕಾರಣ 2021 ರಲ್ಲಿ ರದ್ದುಗೊಳಿಸಲಾಗಿತ್ತು. ಆದರೀಗ ಅದೇ ನಿಯಮವನ್ನು ಜಾರಿಗೆ ತರುವಂತೆ ಸಿಎಸ್ಕೆ ಆಗ್ರಹಿಸಿದೆ.
ಸಿಎಸ್ಕೆ ಫ್ರಾಂಚೈಸಿಯು ಈ ನಿಯಮವನ್ನು ಜಾರಿಗೆ ತರುವಂತೆ ಆಗ್ರಹಿಸಲು ಮುಖ್ಯ ಕಾರಣ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗುತ್ತಿರುವುದು. ಇದೀಗ ಈ ನಿಯಮ ಜಾರಿಯಾದರೆ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಳ್ಳಬಹುದು. ಅದು ಸಹ ಕಡಿಮೆ ಮೊತ್ತವನ್ನು ನೀಡುವ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಹ.
ಅಂದರೆ ಕಳೆದ ಸೀಸನ್ನಲ್ಲಿ ರಿಟೈನ್ ಮಾಡಲಾದ ಅನ್ಕ್ಯಾಪ್ಡ್ ಆಟಗಾರರಿಗೆ ಕೇವಲ 4 ಕೋಟಿ ರೂ. ನಿಗದಿ ಮಾಡಲಾಗಿತ್ತು. ಈ ಬಾರಿ ಧೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಪರಿಗಣಿಸಿದರೆ, ಕಡಿಮೆ ಮೊತ್ತದಲ್ಲಿ ರಿಟೈನ್ ಮಾಡಿಕೊಳ್ಳಬಹುದು. ಇತ್ತ ಧೋನಿಯನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಉಳಿಸಿಕೊಂಡರೆ, ಮತ್ತೋರ್ವ ರಾಷ್ಟ್ರೀಯ ಆಟಗಾರನನ್ನು ರಿಟೈನ್ ಮಾಡಿಕೊಳ್ಳಲು ಸಿಎಸ್ಕೆಗೆ ಅವಕಾಶ ದೊರೆಯಲಿದೆ.
ಇದೇ ಪ್ಲ್ಯಾನಿಂಗ್ನೊಂದಿಗೆ ಸಿಎಸ್ಕೆ ಫ್ರಾಂಚೈಸಿಯು ಹಳೆಯ ನಿಯಮವನ್ನು ಜಾರಿಗೆ ತರುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಈ ಪ್ಲ್ಯಾನ್ಗೆ ಸನ್ರೈಸರ್ಸ್ ಹೈದರಾಬಾದ್ ಸೇರಿದಂತೆ ಕೆಲ ತಂಡಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ನಿಮಯವು ಜಾರಿಗೆ ಬರುತ್ತಾ ಇಲ್ಲವಾ ಎಂಬುದೇ ಈಗ ಕುತೂಹಲ. ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಸಿಎಸ್ಕೆ ಭರ್ಜರಿ ಪ್ಲ್ಯಾನ್ ಮಾಡುತ್ತಿದ್ದು, ಈ ಮೂಲಕ ಅತ್ಯುತ್ತಮ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದಂತು ಸುಳ್ಳಲ್ಲ.