ಬೆಂಗಳೂರು: ಸದ್ಯ ಪೆಟ್ರೋಲ್, ಡೀಸೆಲ್ ತೈಲ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳುತ್ತಿರುವ ಕರುನಾಡಿನ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಸ್ ಪ್ರಯಾಣ ದರ ಹೆಚ್ಚಿಸಲು ಕೆಎಸ್‌ಆರ್‌ಟಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಸ್ ಪ್ರಯಾಣ ದರ 15% ರಿಂದ 20% ವರೆಗೆ ಹೆಚ್ಚಿಸಲು ಜುಲೈ 14ರಂದೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದು ಪ್ರತಿಕ್ರಿಯಿಸಿದ್ದು, ಪ್ರಸ್ತಾವನೆ ಬಂದಿದೆ. ನಾನಿನ್ನೂ ಅದನ್ನ ನೋಡಿಲ್ಲ, ದರ ಏರಿಕೆ ಮಾಡುವ ಬಗ್ಗೆ ಸಧ್ಯಕ್ಕೆ ಯಾವುದೇ ನಿರ್ಧಾರವೂ ಇಲ್ಲ ಎಂದು ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್‌ಗೆ ಕೃತಜ್ಞತೆ ಇಲ್ಲ:
ಇದಕ್ಕೂ ಮುನ್ನ ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಬಿಜೆಪಿ ಪಕ್ಷದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದ ದಿನದಿಂದ ಬಿಜೆಪಿ ಅನ್ಯಾಯ ಆಗುತ್ತಿದೆ. ರಾಜ್ಯಕ್ಕೆ ಕಾಯಂ ಆಗಿ ಚೊಂಬು ಸಿಗುತ್ತಿದೆ. ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್ ಆಯ್ಕೆ ಆಗಿದ್ದರೂ ಕೃತಜ್ಞತೆ ಇಲ್ಲ. ನರೇಂದ್ರ ಮೋದಿ ಏನ್ ಮಾಡಿಲ್ಲ ಅಂದರೂ 19 ಜನರನ್ನು ಜನ ಸಂಸದರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಇದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.
ಬಿಜೆಪಿ ದೇಶದ ಆಸ್ತಿಯನ್ನೇ ಮಾರುತ್ತಿದೆ:
10 ವರ್ಷಗಳ ಹಿಂದೆ ಮೋದಿ ಏನು ಹೇಳಿರೋ ಈಗ ಅದೆಲ್ಲವನ್ನೂ ಮರೆತ್ತಿದ್ದಾರೆ. ಗಾಳಿ, ಬೆಳಕು ಬಿಟ್ಟು ಎಲ್ಲದಕ್ಕೂ ಜಿಎಸ್‌ಟಿ ಹಾಕಿದ್ದಾರೆ. ದೇಶದ ಸಂಪತ್ತನ್ನ ಲೂಟಿ ಮಾಡೋಕೆ ಬಿಟ್ಟಿದ್ದಾರೆ. ಅಂಬಾನಿ ಮೂಲಕ ಲೂಟಿ ಮಾಡೋಕೆ ಬಿಟ್ಟಿದ್ದಾರೆ. ದೇಶದ ಆಸ್ತಿಯನ್ನು ಬಿಜೆಪಿ ಮಾರುತ್ತಿದೆ. ಅನೇಕ ರಾಜ್ಯಗಳಿಗೆ ಬಜೆಟ್ ನಲ್ಲಿ ಹಣ ಕೊಟ್ಟಿಲ್ಲ. ಬಿಹಾರ ಆಂಧ್ರಪ್ರದೇಶಕ್ಕೆ ಹೆಚ್ಚಿನ ಹಣ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾಸ್ತಿ ದಿನ ಉಳಿಯಲ್ಲ. ಬಿಜೆಪಿ ಸರ್ಕಾರ ಇರುವರಿಗೆ ರಾಜ್ಯಕ್ಕೆ ಮಾರಕ ಎಂದು ಎಚ್ಚರಿಸಿದ್ದಾರೆ.
140 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನ ಮೋದಿ ಮಾಡಿದ್ದಾರೆ. ಬಿಜೆಪಿ ಇರುವರಿಗೆ ನಮಗೆ ಭವಿಷ್ಯ ಇಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗ್ತಿದೆ. ರಾಜ್ಯದ ಜನತೆ ಬಗ್ಗೆ ಬಿಜೆಪಿಗೆ ಕೃತಜ್ಞತೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ 19 ಸೀಟ್ ನೀಡಿದ್ರೂ ರಾಜ್ಯದ ಜನತೆ ಬಗ್ಗೆ ಕೃತಜ್ಞತೆ ಇಲ್ಲ. ಈ ಬಗ್ಗೆ ರಾಜ್ಯದ ಸಂಸದರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ.