ಬೆಂಗಳೂರು, ಜುಲೈ 01: ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ತೈಲ ಮಾರುಕಟ್ಟೆ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಹಿ ಸುದ್ದಿ ನೀಡಿದೆ. ಜುಲೈ ತಿಂಗಳ ಆರಂಭದಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 31ರೂ. ಇಳಿಕೆ ಮಾಡಿದೆ. ಹೊಸ ಬೆಲೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಸಿದ್ದರಿಂದ ಹೋಟೆಲ್ ಉದ್ಯಮಿಗಳಿಗೆ ಅನುಕೂಲವಾಗಿದೆ. ಆದರೆ, ಸಬ್ಸಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬೆಲೆ ಇಳಿಕೆ ನಂತರ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್ ಬೆಲೆ 1813 ರೂಪಾಯಿ ಇದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಬೆಲೆ 1,646 ರೂಪಾಯಿ ಇದೆ. ಮುಂಬೈ ಮತ್ತು ಚೆನ್ನೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 1,598 ಮತ್ತು 1,809.5 ರೂ. ಗೆ ಇಳಿದಿದೆ. ಎರಡೂ ನಗರಗಳಲ್ಲಿ 31 ರೂ. ಇಳಿಕೆಯಾಗಿದೆ.
ಇಂಡಿಯನ್ ಆಯಿಲ್ ಪ್ರಕಾರ 14.5 ಕೆಜಿಯ ಸಬ್ಸಿಡಿ ಅಡುಗೆ ಅನಿಲ ಬೆಲೆ ಕೋಲ್ಕತ್ತಾದಲ್ಲಿ 892 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕ್ರಮವಾಗಿ 803, 802.5, 818.5 ರೂ. ಆಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿ 2024ರ ಜೂನ್ನಲ್ಲಿ, ಇಂಡಿಯನ್ ಆಯಿಲ್ ನಾಲ್ಕು ಮೆಟ್ರೋ ನಗರಗಳಲ್ಲಿ 19 ಕೆಜಿಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 72 ರೂ.ಗೆ ಇಳಿಕೆ ಮಾಡಿತ್ತು.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಅಂತರರಾಷ್ಟ್ರೀಯ ಇಂಧನದ ಸರಾಸರಿ ಬೆಲೆ ಮತ್ತು ವಿದೇಶಿ ವಿನಿಮಯ ದರದ ಆಧಾರದ ಮೇಲೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ಒಂದನೇ ತಾರೀಖಿನಂದು ಪರಿಷ್ಕರಿಸುತ್ತವೆ.