ರಾಜ್ಯ ಸರ್ಕಾರದ ವಿರುದ್ಧ ಸ್ವಜನಪಕ್ಷಪಾತ ಆರೋಪ ಮಾಡಿದ ಬಿಜೆಪಿಗೆ ತಿಮ್ಮಾಪುರ ತಿರುಗೇಟು

ಬೆಂಗಳೂರು, ಜೂನ್​ 30: ಅಬಕಾರಿ ಇಲಾಖೆ ಬೆಂಗಳೂರು ವ್ಯಾಪ್ತಿಯ ಎಂಟು ಜನ ಉಪ ಆಯಕ್ತರ ಪೈಕಿ ನಾಲ್ವರನ್ನು ತಮ್ಮದೇ ಜಾತಿಯ ಅಧಿಕಾರಿಗಳನ್ನು ನೇಮಿಸಿದ್ದನ್ನು ರಾಜ್ಯ ಬಿಜೆಪಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಸ್ವಜನ ಪಕ್ಷಪಾತದ ಗಂಭೀರ ಆರೋಪ ಮಾಡಿದೆ. ಅಬಕಾರಿ ಇಲಾಖೆಯಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ಒಂದೇ ಸಮುದಾಯದ ನಾಲ್ವರಿಗೆ ಸ್ಥಾನಮಾನ ನೀಡಲಾಗಿದೆ. ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ಕೆಲ ಸಚಿವರ ಆಪ್ತರಿಗೆ ಮಣೆ ಹಾಕಲಾಗಿದೆ. ಈ ಹಿಂದೆಯೂ ರಾಜ್ಯ ಸರ್ಕಾರದ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಪತ್ರ ಬರೆಯಲಿದ್ದಾರೆ.

ಅಬಕಾರಿ ಇಲಾಖೆ ಒಂದೇ ಅಲ್ಲ ಇನ್ನಿತರ ಇಲಾಖೆಯಲ್ಲೂ ಸ್ವಜನಪಕ್ಷಪಾತ ನಡೆಯುತ್ತಿದೆ. ಕಾಂಗ್ರೆಸ್ ಅಂದ್ರೆ ಸ್ವಜನ ಪಕ್ಷಪಾತ. ಗಾಂಧಿ ಕುಟುಂಬವೇ ಇದಕ್ಕೆ ಉದಾಹರಣೆ. ಈಗ ಸಚಿವರುಗಳು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಜೋರಾಗಿ ನೀಡೆಯುತ್ತಿದೆ. ಹೀಗಾಗಿ ಸಚಿವರು ತಮ್ಮ ಸಮುದಾಯದವರಿಗೆ ಸ್ಧಾನಮಾನ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ಇತ್ತಿಚೆಗೆ ಇಲಾಖೆಗಳಲ್ಲಿ ಸಿಂಡಿಕೇಟ್​ಗಳೇ ಇಲಾಖೆಯ ವರ್ಗಾವಣೆಯನ್ನು ನಿರ್ಧಾರ ಮಾಡುತ್ತಾರೆ. ಇದೇ ಸಿಂಡಿಕೇಟ್​​ಗಳೇ ಸಚಿವರ ಮೇಲೂ ಪ್ರಭಾವ ಬೀರುತ್ತಾರೆ. ಸಚಿವರು ವರ್ಗಾವಣೆಯನ್ನು ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಸಿಟಿ ರವಿ ಆರೋಪ ಮಾಡಿದ್ದಾರೆ.

ಸ್ವಜನಪಕ್ಷಪಾತಕ್ಕೆ ಉದಾಹರಣೆ ಕಾಂಗ್ರೆಸ್: ಅಶೋಕ್​​​

ವಿಪಕ್ಷದವರ ಸ್ವಜನಪಕ್ಷಪಾತ ಆರೋಪಕ್ಕೆ ಅಬಕಾರಿ ಸಚಿವ ಆರ್​ಬಿ ತಿಮ್ಮಾಪುರ ‌ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ‌ಜಿಲ್ಲೆ ಮುಧೋಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಸ್ವಜನಪಕ್ಷಪಾತ ನಡೆದಿಲ್ಲ. ಅಂತಹ ಯಾವುದೇ ಹುದ್ದೆಗಳನ್ನು ಜಾತಿ ನೋಡಿ ಕೊಟ್ಟಿಲ್ಲ. ಅರ್ಹತೆ, ಮತ್ತೊಂದು, ಮಗದೊಂದು ನೋಡಿ ನೇಮಕ ಮಾಡಿಕೊಂಡಿರುತ್ತೇವೆ ಎಂದು ಹೇಳಿದರು.

ಜಾತಿವಾರು ಅಧಿಕಾರಿಗಳನ್ನು ನೇಮಕ ಮಾಡಿಲ್ಲ. ಅರ್ಹತೆಗನುಗುಣವಾಗಿ ಹಲವಾರು ವಿಚಾರಗಳನ್ನು, ಗಮನದಲ್ಲಿಟ್ಟುಕೊಂಡು ನಾವು ನೇಮಕ ಮಾಡಿಕೊಂಡಿದ್ದೇವೆ. ವರ್ಗಾವಣೆ ಇಂತಹವರಿಗೆ ಮಾಡಬೇಕು‌‌, ಇಂತಹವರಿಗೆ ಬೇಡ ಅಂತಹದ್ದೇನಿಲ್ಲ. ಸಹಜವಾಗಿ ಪ್ರಕ್ರಿಯೆ ನಡೆಯುತ್ತದೆ, ಅರ್ಹತೆ ಮೇಲೆನೆ ವರ್ಗಾವಣೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಭೈರತಿ ಸುರೇಶ್​ ವಾಗ್ದಾಳಿ

ಆರ್.ಅಶೋಕ್ ಅವರು ಒಂದಾನೊಂದು ಕಾಲದಲ್ಲಿ‌ ಕಂದಾಯ ಇಲಾಖೆ ಸಚಿವರಾಗಿದ್ದರು ಅಷ್ಟೆ. ಈಗ ವಿರೋಧ ಪಕ್ಷದ ನಾಯಕ. ಯಾವ ಅಧಿಕಾರಿಯನ್ನು ಎಲ್ಲಿ ನೇಮಕ ಮಾಡಬೇಕು ಎಂದು ಸರ್ಕಾರಕ್ಕೆ ಗೊತ್ತಿದೆ. ಸಮುದಾಯದ ಮೇಲೆ ಅಧಿಕಾರ ಕೊಡುವ ಪದ್ಧತಿ ಕಾಂಗ್ರೆಸ್​ನಲ್ಲಿ‌ ಇಲ್ಲ. ಇದೆಲ್ಲ ಬಿಜೆಪಿ ಗಿಮಿಕ್ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.

ವಿಪಕ್ಷ ನಾಯಕ ಆದಮೇಲೆ ಆರ್.ಅಶೋಕ್ ಅವರ ಬುದ್ದಿ ಹೋಗಿಬಿಟ್ಟಿದೆ. ಏನೂ ವಿಚಾರ ಸಿಗದೆ ದಿನಾಲೂ ಬಾಯಿಗೆ ಬಂದಂಗೆ ಮಾತಾಡುತ್ತಿದ್ದಾರೆ. ಬೆಳಗಾದರೆ ಈ ಬಿಜೆಪಿಯವರು ಯಾಕೆ‌ ಜಾತಿ ಜಾತಿ ಅಂತ ಸಾಯುತ್ತಿದ್ದಾರೆ ಅಂತ ಅರ್ಥ ಆಗುತ್ತಲಿ. ಕುವೆಂಪು ಹೇಳಿದ್ದು ಬಿಜೆಪಿಯವರಿಗೆ ಗೊತ್ತಿಲ್ವಾ?ಮಹಾನ್ ರಾಷ್ಟ್ರೀಯ ವ್ಯಕ್ತಿ ಅಂತಾರೆ ಮಾತಿಗೆ ಮುಂಚೆ ಜಾತಿ‌ ವಿಚಾರ ತರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ಯಾತೀತ ವ್ಯಕ್ತಿ ಎಂದರು.

ಈ‌ ದೇಶ, ರಾಜ್ಯದಲ್ಲಿರುವ ಎಲ್ಲ ಸಮುದಾಯಗಳು ನಮಗೆ ಒಂದೇನೆ. ಅಧಿಕಾರ ಕೊಡುವುದು,‌ ಡಿಸಿ‌, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಅವರನ್ನು ಜಾತಿ ಮೇಲೆ‌ ನೇಮಕ ಮಾಡಲ್ಲ. ಆ ವ್ಯಕ್ತಿಯ ಯೋಗ್ಯತೆ ಮೇಲೆ ಕೊಡಲಾಗುತ್ತದೆ. ಬಿಜೆಪಿಯವರು ಸುಮ್ಮನೆ ಸುಳ್ಳು ಆಪಾದನೆ ಮಾಡುವುದನ್ನು ಬಿಡಬೇಕು ಎಂದು ವಾಗ್ದಾಳಿ ಮಾಡಿದರು.