T20 World Cup 2024: ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವಕಪ್ ಗೆದ್ದುಕೊಂಡಿದೆ. ಈ ಗೆಲುವಿನ ರೂವಾರಿಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಆದರೆ ಇದೇ ವಿರಾಟ್ ಕೊಹ್ಲಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲು ಬಿಸಿಸಿಐ ಹಿಂದೇಟು ಹಾಕಿತ್ತು ಎಂಬುದೇ ಸತ್ಯ.
ಈ ಬಾರಿಯ ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತೆ ಆಯ್ಕೆ ಸಮಿತಿಗೆ ಬಿಸಿಸಿಐ ಸೂಚಿಸಿತ್ತು. ಆದರೆ ರೋಹಿತ್ ಶರ್ಮಾ ಪಟ್ಟು ಹಿಡಿದ ಕಾರಣ ಕಿಂಗ್ ಕೊಹ್ಲಿಯನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಅದರಂತೆ ವಿಶ್ವಕಪ್ನಲ್ಲಿ ಕಣಕ್ಕಿಳಿದ ಕೊಹ್ಲಿ 7 ಪಂದ್ಯಗಳಲ್ಲೂ ವಿಫಲರಾಗಿದ್ದರು.
ಅದರಲ್ಲೂ ಸೆಮಿಫೈನಲ್ನಲ್ಲಿ ಕೇವಲ 9 ರನ್ಗಳಿಸಿ ಔಟಾಗಿದ್ದ ವಿರಾಟ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಆರಂಭಿಕನ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸುವಂತೆ ಕೂಗುಗಳು ಕೇಳಿಬಂದಿದ್ದವು. ಆದರೆ ರೋಹಿತ್ ಶರ್ಮಾ ತಮ್ಮ ನಿರ್ಧಾರಕ್ಕೆ ಅಚಲವಾಗಿದ್ದರು. ಯಾವುದೇ ಒತ್ತಡಕ್ಕೂ ಮಣಿಯಲು ಹಿಟ್ಮ್ಯಾನ್ ಸಿದ್ಧರಿರಲಿಲ್ಲ.
ಸೆಮಿಫೈನಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಕೂಡ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ಅವರು ಫೈನಲ್ನಲ್ಲಿ ಆಡುತ್ತಾರೆ. ಅದಕ್ಕಾಗಿ ರನ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ರೋಹಿತ್ ಶರ್ಮಾ ಅವರ ಈ ಹೇಳಿಕೆ ವಿರುದ್ಧ ಕೂಡ ಕೆಲವರು ಕೊಂಕು ನುಡಿದಿದ್ದರು.
ಆದರೆ ರೋಹಿತ್ ಶರ್ಮಾ ಅವರ ನಂಬಿಕೆ ಹುಸಿಯಾಗಲಿಲ್ಲ. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ ಕ್ರೀಸ್ ಕಚ್ಚಿ ನಿಂತು ಇನಿಂಗ್ಸ್ ಕಟ್ಟಿದರು. ಪರಿಣಾಮ ಅರ್ಧಶತಕ ಪೂರೈಸಲು 48 ಎಸೆತಗಳನ್ನು ತೆಗೆದುಕೊಂಡರು. ಇದರ ಬೆನ್ನಲ್ಲೇ ಮತ್ತೆ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದರು.
ಅರ್ಧಶತಕದ ಬಳಿಕ ಬ್ಯಾಟಿಂಗ್ ಗೇರ್ ಬದಲಿಸಿದ ವಿರಾಟ್ ಕೊಹ್ಲಿ ಅಬ್ಬರಿಸಿದರು. ಪರಿಣಾಮ ಕಿಂಗ್ ಕೊಹ್ಲಿ ಬ್ಯಾಟ್ನಿಂದ 59 ಎಸೆತಗಳಲ್ಲಿ 76 ರನ್ಗಳು ಮೂಡಿಬಂತು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 176 ರನ್ಗಳಿಸಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 7 ರನ್ಗಳ ರೋಚಕ ಜಯ ಸಾಧಿಸಿತು.
ಅಂದರೆ ಇಲ್ಲಿ ಟಿ20 ವಿಶ್ವಕಪ್ ಆಯ್ಕೆಯಿಂದ ಹಿಡಿದು, ಅಂತ್ಯದವರೆಗೂ ಬೆಂಬಲ ಸೂಚಿಸಿದ ನಾಯಕ ರೋಹಿತ್ ಶರ್ಮಾ ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಅಲ್ಲದೆ ದಿಗ್ಗಜರಿಬ್ಬರು ಸೇರಿ 17 ವರ್ಷಗಳ ಬಳಿಕ ಭಾರತ ತಂಡಕ್ಕೆ ಟಿ20 ವಿಶ್ವಕಪ್ ತಂದುಕೊಡುವಲ್ಲಿ ಸಫಲರಾಗಿರುವುದು ವಿಶೇಷ.