ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಹನಿ ನೀರಿಗೂ ಹಾಹಾಕಾರ; ಹಣಕೊಟ್ಟು ಬಾಟಲಿ ನೀರು ಖರೀದಿಸುವ ಸ್ಥಿತಿ

ಯಾದಗಿರಿ, ಜೂನ್.25: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಹನಿ ಹನಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಂದಿನ ಸಿಎಂ, ಯಾದಗಿರಿ ಜಿಲ್ಲೆಯ ಜನರ ಆರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆಯನ್ನು 2021 ರಲ್ಲಿ ಮಾಡಿದ್ರು. ಆಸ್ಪತ್ರೆ ಉದ್ಘಾಟನೆ ಮಾಡಿ ಮೂರು ವರ್ಷ ಕಳೆದಿದೆ. ಆದ್ರೆ, ಆಸ್ಪತ್ರೆಯಲ್ಲಿ ಅಧಿಕಾರಿಗಳು ಶುದ್ಧ ನೀರು ಸೌಲಭ್ಯ ಕಲ್ಪಿಸುವ ಕಾಳಜಿ ತೋರಿಲ್ಲ.

ಜಿಲ್ಲಾಸ್ಪತ್ರೆಯು ವೈಧ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬರುತ್ತದೆ. ಯಾದಗಿರಿ ನಗರದ ಮುದ್ನಾಳ ಸಮೀಪದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನೀರಿಗಾಗಿ ಪರದಾಡುವಂತಾಗಿದೆ. ರೋಗಿಗಳಿಗು ನೀರಿನ ಸೌಕರ್ಯ ಕಲ್ಪಿಸಿಲ್ಲ. ಅದೇ ರೀತಿ ಆಸ್ಪತ್ರೆಯಲ್ಲಿ ಕಾರ್ಯ ಮಾಡುವ ಸಿಬ್ಬಂದಿ ಹಾಗೂ ಸಾರ್ವಜನರಿಗೆ ನೀರಿನ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು,ಸಿಬ್ಬಂದಿ ವರ್ಗ ಹಾಗೂ ಜನರು ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ರೋಗಿಗಳು ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ನೀರಿನ ಸೌಲಭ್ಯ ಸರಿಯಾಗಿ ಕಲ್ಪಿಸದ ಹಿನ್ನಲೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ರೋಗಿಗಳ ಸಂಬಂಧಿಕರು ಆಸ್ಪತ್ರೆ ಹೊರಭಾಗದ ಹೋಟೆಲ್​ಗೆ ತೆರಳಿ ಬಾಟಲ್ ನೀರು ಖರೀದಿ ಮಾಡಿ ನೀರಿನ ದಾಹ ತಿರಿಸಿಕೊಳ್ಳುತ್ತಿದ್ದಾರೆ. ಬಡ ರೋಗಿಗಳು ನೀರಿಗಾಗಿ ನಿತ್ಯವು ನೂರಾರು ರೂಪಾಯಿ ಹಣ ವೆಚ್ಚ ಮಾಡುವಂತಾಗಿದೆ. ಆಸ್ಪತ್ರೆಯಲ್ಲಿ ಕೇವಲ ಎರಡು ಶುದ್ದ ನೀರು ಪೂರೈಕೆ ಮಾಡುವ ಘಟಕಗಳಿವೆ. ಅದರಲ್ಲಿ ಒಂದು ಘಟಕದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತೊಂದು ಘಟಕ ಬಂದ್ ಆಗಿದೆ. ಆದ್ರೆ, ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕಿ ಹಾಗೂ ಆಸ್ಪತ್ರೆಯ ಅಧೀಕ್ಷಕಿ ಡಾ.ರಿಜ್ವಾನ್ ಅವರು, ಆಸ್ಪತ್ರೆ ಮೇಲೆ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ನೀರು ಪೂರೈಕೆ ಮಾಡುವ ಪೈಪ್ ಕೆಟ್ಟು ಹೋಗಿದ್ದು. ಕಾಮಗಾರಿ ನಡೆಯುತ್ತಿರುವದರಿಂದ ಪೈಪ್ ಲೈನ್ ನೀರು ಪೂರೈಕೆ ಬಂದ್ ಮಾಡಲಾಗಿದೆ. ನೀರಿನ ಕ್ಯಾನ್ ಗಳನ್ನು ಇಟ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೃಹತ್ ನೀರಿನ ಘಟಕ ಅಳವಡಿಕೆ ಮಾಡಲಾಗುತ್ತದೆಂದರು.

ನೀರಿನ ಕ್ಯಾನ್ ಗಳನ್ನು ಇಡಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದಾರೆಂಬುದು, ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ ನಿದರ್ಶನವಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಬೇಕಿದೆ.