ಬೆಂಗಳೂರು, ಜೂನ್ 22: ಬಿಡದಿಯಲ್ಲಿ ಆರಂಭವಾಗಲಿರುವ ಕರ್ನಾಟಕದ ಮೊದಲ ‘ತ್ಯಾಜ್ಯದಿಂದ ವಿದ್ಯುತ್ ’ ಉತ್ಪಾದಿಸುವ ಸ್ಥಾವರ ಜುಲೈ ಮಧ್ಯದ ವೇಳೆಗೆ ಪ್ರಾಯೋಗಿಕ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆಯಿದೆ. 15 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಸ್ಥಾವರವು 11.5 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದೆ ಎಂದು ವರದಿಯಾಗಿದೆ. ಸ್ಥಾವರದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು ಈಗ ಪ್ರಾಯೋಗಿಕ ಕಾರ್ಯಾಚರಣೆ ಪ್ರಾರಂಭಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ನಾವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ಜುಲೈ ಎರಡನೇ ವಾರದಲ್ಲಿ ಪ್ರಯೋಗಗಳನ್ನು ಆರಂಭಿಸಲು ಸಾಧ್ಯವಾಗಲಿದೆ. ಪ್ರಾಯೋಗಿಕ ಕಾರ್ಯಾಚರಣೆ ಪೂರ್ಣಗೊಂಡ ನಂತರ, ಅದರಲ್ಲಿ ಕಂಡುಕೊಂಡ ಅಂಶಗಳ ಆಧಾರದ ಮೇಲೆ ವ್ಯವಸ್ಥೆಯನ್ನು ಹೇಗೆ ಉತ್ತಮಗೊಳಿಸಬೇಕು ಮತ್ತು ನಂತರ ಅದನ್ನು ಸ್ಥಿರಗೊಳಿಸಲು ಹೇಗೆ ಅವಕಾಶ ಮಾಡಿಕೊಡಬೇಕು ಎಂಬ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೆಪಿಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಯೋಜನೆಯು 2023 ರ ಅಕ್ಟೋಬರ್ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾರ್ಮಿಕರ ಸಮಸ್ಯೆಗಳು ಮತ್ತು ಸಲಕರಣೆಗಳ ಆಮದು ಪ್ರಕ್ರಿಯೆ ವಿಳಂಬದಿಂದಾಗಿ ಕಾಮಗಾರಿ ವಿಳಂಬಗೊಂಡಿತ್ತು.
ಈ ಸ್ಥಾವರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಜಂಟಿ ಉದ್ಯಮವಾಗಿದೆ. ಇತ್ತೀಚೆಗಷ್ಟೇ ಸ್ಥಾವರಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶೀಘ್ರದಲ್ಲಿಯೇ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸ್ಥಾವರಕ್ಕೆ ಅಗತ್ಯ ಪ್ರಮಾಣದ ಒಣ ತ್ಯಾಜ್ಯವನ್ನು ಪೂರೈಸಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದ್ದರು.
600 ಮೆಟ್ರಿಕ್ ಟನ್ ಒಣ ತ್ಯಾಜ್ಯ ಸಂಸ್ಕರಿಸಲು ನೆರವು
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರಗಳು ಸಾಮಾನ್ಯವಾಗಿ ಒಣ ತ್ಯಾಜ್ಯವನ್ನು ಬಳಸುತ್ತವೆ. ಸಂಪೂರ್ಣ ದಹನವನ್ನು ಖಚಿತಪಡಿಸಿಕೊಳ್ಳಲು ಒಣ ತ್ಯಾಜ್ಯವನ್ನು ಹೆಚ್ಚಿನ ತಾಪಮಾನದಲ್ಲಿ ಸುಡಲಾಗುತ್ತದೆ ಮತ್ತು ಉತ್ಪತ್ತಿಯಾಗುವ ಶಾಖವನ್ನು ವಿದ್ಯುತ್ ಉತ್ಪಾದಿಸಲು ಬಳಸಲಾಗುತ್ತದೆ. ಸ್ಥಾವರವು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಸುಮಾರು 600 ಮೆಟ್ರಿಕ್ ಟನ್ ಒಣ ತ್ಯಾಜ್ಯವನ್ನು ಸಂಸ್ಕರಿಸಲು ಸಾಧ್ಯವಾಗಲಿದೆ ಮತ್ತು ಇದು ಸ್ಥಾವರದ ಮುಖ್ಯ ಉಪಯೋಗಗಳಲ್ಲಿ ಒಂದಾಗಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ಪಾದನಾ ವೆಚ್ಚ ಹೆಚ್ಚು!
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚು. ನಾವು ಪ್ರತಿ ಯೂನಿಟ್‌ಗೆ ಸುಮಾರು 8 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದಾಗ್ಯೂ, ಇದು ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಾಯ ಮಾಡಲಿದೆ ಮತ್ತು ಇದೇ ಕಾರಣಕ್ಕೆ ಇದನ್ನು ಬೆಂಗಳೂರಿನ ಸಮೀಪ ಬರುವಂತೆ ಸ್ಥಾಪಿಸಲಾಗುತ್ತಿದೆ.
ನಗರದಲ್ಲಿ ಒಣ ತ್ಯಾಜ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ ಮತ್ತು ಈ ಯೋಜನೆಯ ಮೂಲಕ ನಾವು ಅದನ್ನು ಪರಿಹರಿಸಬಹುದು ಎಂದು ಮತ್ತೊಬ್ಬ ಕೆಪಿಸಿಎಲ್ ಅಧಿಕಾರಿ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. 260 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾವರ ನಿರ್ಮಾಣವಾಗಿದೆ.