ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಸಾಧ್ಯವಾಗಿಲ್ಲ ಎಂದು ಮಹಿಳೆಯೊಬ್ಬರು ಮಗಳ ಜತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 26 ವರ್ಷದ ಮಹಿಳೆ ಹಣದ ಕೊರತೆಯಿಂದಾಗಿ ಸಿಬಿಎಸ್‌ಇ ಶಾಲೆಗೆ ಕಳುಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೊಂದು ಐದು ವರ್ಷದ ಮಗಳ ಜತೆಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ದಿನಗಳ ಹಿಂದೆ ಮಧ್ಯ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಹಸಿಲ್‌ನ ಮಾಲೆಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಔರಾದ್ ಶಹಾಜಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಭಾಗ್ಯಶ್ರೀ ವೆಂಕಟ್ ಹಲ್ಸೆ (26) ಮತ್ತು ಸಮೀಕ್ಷಾ ವೆಂಕಟ್ ಹಲ್ಸೆ (5) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿಯು ಒಂದೂವರೆ ಎಕರೆ ಜಮೀನನ್ನು ಹೊಂದಿದ್ದು, ಕುಟುಂಬದ ಜೀವನೋಪಾಯವು ಮುಖ್ಯವಾಗಿ ಮೇಕೆಗಳನ್ನು ಮೇಯಿಸುವುದನ್ನು ಅವಲಂಬಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಭಾಗ್ಯಶ್ರೀ ತನ್ನ ಮಗ ಮತ್ತು ಮಗಳನ್ನು ಸಿಬಿಎಸ್‌ಇ-ಸಂಯೋಜಿತ ಶಾಲೆಗೆ ಕಳುಹಿಸಲು ಬಯಸಿದ್ದಳು, ಅದು ತನ್ನ ಗಂಡನ ಸಾಮರ್ಥ್ಯಕ್ಕೆ ಮೀರಿದೆ. ಇದರಿಂದ ಆಕೆ ಆಗಾಗ್ಗ ಖಿನ್ನತೆಗೆ ಒಳಗಾಗುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಆಕೆ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು ಮತ್ತು ಇದು ಅವಳ ಖಿನ್ನತೆಗೆ ಕಾರಣವಾಯಿತು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಮಂಗಳವಾರ ಸಂಜೆ 5.30ರ ಸುಮಾರಿಗೆ ತನ್ನ ಮಗಳೊಂದಿಗೆ ಮತ್ತೊಬ್ಬ ರೈತನ ಒಡೆತನದ ಬಾವಿಗೆ ಹೋಗಿದ್ದಳು. ಅಲ್ಲಿಂದ ಪತಿ ವೆಂಕಟ್ ಹಲ್ಸೆಗೆ ವಿಡಿಯೋ ಕಾಲ್ ಮಾಡಿ ಮಗಳ ಮುಖವನ್ನು ಕೊನೆಯ ಬಾರಿ ನೋಡುವಂತೆ ಹೇಳಿ ಬಾಲಕಿಯೊಂದಿಗೆ ಬಾವಿಗೆ ಹಾರಿದ್ದಾಳೆ.
ಬಳಿಕ ಸ್ಥಳೀಯರ ನೆರವಿನಿಂದ ಪೊಲೀಸರು ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಹಿಳೆ ಆಟವಾಡುತ್ತಿದ್ದ ಮಗನನ್ನು ಸಹ ತನ್ನೊಂದಿಗೆ ಬಾವಿಗೆ ಕರೆದೊಯ್ಯಲು ಪ್ರಯತ್ನಿಸಿದಳು, ಆದರೆ ಮಗ ನಿರಾಕರಿಸಿ ಅಲ್ಲಿಂದ ಓಡಿ ಹೋಗಿದ್ದ ಎಂಬುದು ತಿಳಿದುಬಂದಿದೆ.