ಬೆಂಗಳೂರು, ಜೂನ್.16: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಹಿನ್ನಲೆ ಮಕ್ಕಳು ಹಾಗೂ ಜನರಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗಿದೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ ವಾಂತಿ ಪ್ರಕರಣಗಳು ಹೆಚ್ಚಾಗಿದೆ. ಬದಲಾದ ವಾತಾವರಣ ಹಿನ್ನಲೆ ಡೆಂಗ್ಯೂ, ಟೈಫಾಯ್ಡ್, ವೈರಲ್ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿದೆ. ಕಳೆದ ಎರಡು ದಿನಗಳಲ್ಲಿ ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಒಂದು ಸಾವು ಕೂಡಾ ರಾಜ್ಯದಲ್ಲಿ ವರದಿಯಾಗಿದೆ. ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಒಟ್ಟು 5 ಸಾವಿರ ಗಡಿ ದಾಟಿ ಡೆಂಗ್ಯೂ ಕೇಸ್ ದಾಖಲಾಗ್ತಿದ್ದು. ಬೆಂಗಳೂರಿನಲ್ಲಿ 1,230ಕ್ಕೂ ಹೆಚ್ಚು ಡೆಂಗ್ಯೂ ಜ್ವರ ಪತ್ತೆಯಾದ್ರೆ ರಾಜ್ಯದಲ್ಲಿ 3,557 ಕೇಸ್ ಪತ್ತೆಯಾಗಿದ್ದು ಜೂನ್ ತಿಂಗಳಿನಿಂದ ಕೇಸ್ ಗಳ ಸಂಖ್ಯೆ ಏರಿಕೆ ಕಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಇದರಿಂದ ಡೆಂಗ್ಯೂ ಕಾಯಿಲೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದೆ. ಕಳೆದೊಂದು ವಾರದಿಂದ ರಾಜಧಾನಿಯಲ್ಲಿ ಮಳೆ ಜೊತೆಗೆ ಡೆಂಗ್ಯೂ ಜ್ವರ ಹೆಚ್ಚಾಗಿದೆ. ಜನರು ಮೈ ಕೈ ನೋವು, ಸಿಕ್ಕಾಪಟ್ಟೆ ಕೆಮ್ಮು, ಜ್ವರ, ಮೈಕೈನೋವು ಅಂತ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ರಾಜಧಾನಿಯಲ್ಲಿ ಡೆಂಗ್ಯೂ ಹೆಚ್ಚಾಗಿದ್ದು ವೈರಲ್ ಫೀವರ್ ಕೂಡಾ ಕಂಡು ಬರ್ತಿದೆ. ಮಳೆ ಹಿನ್ನಲೆ ಹೆಚ್ಚು ಟೆಸ್ಟ್ ಮಾಡಲಾಗ್ತೀದೆ. ಹೀಗಾಗಿ ಕೇಸ್ ಹೆಚ್ಚಾಗಿದೆ ಮುನ್ನೆಚ್ಚರಿಕೆ ಅವಶ್ಯಕ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ವಾತಾವರಣದ ಎಫೆಕ್ಟ್ನಿಂದ ಸಾಂಕ್ರಾಮಿಕ ಕೇಸ್ಗಳ ಸಂಖ್ಯೆ ಹೆಚ್ಚಾಗಿದೆ ಅಂತಿದ್ದಾರೆ ವೈದ್ಯರು. ತೀವ್ರ ಜ್ವರ, ನೆಗಡಿ ಕೆಮ್ಮು, ತೀವ್ರವಾದ ಸುಸ್ತು, ಮೈಕೈ ನೋವು, ತಲೆ ಸಿಡಿತ, ಚಳಿ ಜ್ವರ ಹಾಗೂ ಕೆಲವರು ಶೀತ ಜ್ವರದಿಂದ ಬಳಲುತ್ತಿದ್ದಾರೆ. ಇದರ ನಡುವೆ ಮಳೆಯಿಂದ ಡೆಂಗ್ಯೂ ಜ್ವರ, ಶೀತ ಜ್ವರದ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಕ್ಷಣ ಕ್ಷಣದ ಹವಾಮಾನ ಬದಲಾವಣೆ ಜನರ ಅನಾರೋಗ್ಯಕ್ಕೆ ಕಾರಣವಾಗ್ತಿದೆ.
ಒಟ್ಟಿನಲ್ಲಿ ಮಳೆ, ಬಿಸಿಲು ಎರಡರಿಂದ ಬೇಸತ್ತಿದ್ದ ಬೆಂಗಳೂರು ಮಂದಿಗೆ ಖಾಯಿಲೆಗಳು ಮತ್ತೊಂದು ರೀತಿ ತಲೆ ನೋವಾಗಿ ಪರಿಣಮಿಸಿದೆ. ಜನರು ಮನೆ ಸುತ್ತ ಸ್ವಚ್ಛತೆ ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸಲು ಸೂಚಿಸಿದ್ದಾರೆ. ಆದಷ್ಟು ಮನೆಯಲ್ಲಿ ಮಲಗುವ ಹೊತ್ತಿನಲ್ಲಿ ಸೊಳ್ಳೆ ಪರದೆ ಹಾಕುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆ ನೀಡಿದ್ದಾರೆ. ಜ್ವರ ಬಂದು ಮೂರನೇ ದಿನಕ್ಕೆ ಬಿಟ್ಟು ಮತ್ತೆ ಜ್ವರ ಮರುಕಳಿಸಿದರೆ, ಇದರ ಜೊತೆ ವಾಂತಿ ಇದ್ದರೆ ಡೆಂಗ್ಯೂ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.